ರಾಜಕೀಯರಾಜ್ಯಸುದ್ದಿ

ಡಿಸಿಎಂ ಭೇಟಿಯಾದ ಬಯೋಕಾನ್​​ ಮುಖ್ಯಸ್ಥೆ ಕಿರಣ್​​ ಮಂಜುದಾರ್​ ಶಾ

ಬೆಂಗಳೂರು: ನಗರದ ರಸ್ತೆಗುಂಡಿ ನಿರ್ವಹಣೆ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ್ದ ಬಯೋಕಾನ್​​ ಮುಖ್ಯಸ್ಥೆ ಕಿರಣ್​​​ ಮಜುಂದಾರ್​​ ಶಾ ಅವರು ಡಿಸಿಎಂ ಡಿಕೆ ಶಿವಕುಮಾರ್​ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ..

ಉದ್ಯಮಿ ಶಾ ತಮ್ಮ ಸೋದರಳಿಯನ ಮದುವೆಗೆ ಆಹ್ವಾನಿಸಲು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯ ಕುರಿತು ಶಾ ಮತ್ತು ಕರ್ನಾಟಕದ ಸಚಿವರ ನಡುವಿನ ಬಿಸಿ ವಾಗ್ವಾದದ ನಂತರ ಈ ಭೇಟಿಗಳು ನಡೆದಿರುವುದರಿಂದ ಸಂಚಲನ ಸೃಷ್ಟಿಸಿದೆ.

ಭೇಟಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಡಿಕೆಶಿ, ಇಂದು ನನ್ನ ನಿವಾಸದಲ್ಲಿ ಉದ್ಯಮಿ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರನ್ನು ಭೇಟಿಯಾಗಿದ್ದು ಸಂತೋಷವಾಯಿತು. ಬೆಂಗಳೂರಿನ ಬೆಳವಣಿಗೆ, ನಾವೀನ್ಯತೆ ಮತ್ತು ಕರ್ನಾಟಕದ ಬೆಳವಣಿಗೆಯ ಕಥೆಯ ಮುಂದಿನ ಹಾದಿಯ ಕುರಿತು ನಾವು ಉತ್ತಮ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಬೆಂಗಳೂರಿನ ಮೂಲಸೌಕರ್ಯ, ಅದರ ರಸ್ತೆಗಳ ಸ್ಥಿತಿಯ ಕುರಿತ ಶಾ ಅವರ ಟೀಕೆಯನ್ನು ವೈಯಕ್ತಿಕ ಅಜೆಂಡಾ ಎಂದು ಡಿಕೆ ಶಿವಕುಮಾ‌ರ್ ಹೇಳಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಂತಹ ವಿಷಯಗಳನ್ನು ಏಕೆ ಎತ್ತಿ ತೋರಿಸಲಿಲ್ಲ ಎಂದು ಡಿಕೆಶಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಕಿರಣ್ ಶಾ, ಬಿಜೆಪಿ ಮತ್ತು ಜೆಡಿಎಸ್ ಆಡಳಿತದ ಅವಧಿಯಲ್ಲಿ ಬೆಂಗಳೂರಿನಲ್ಲಿ ಹದಗೆಡುತ್ತಿರುವ ಮೂಲಸೌಕರ್ಯವನ್ನು ಟೀಕಿಸಲಾಗಿತ್ತು ಹೇಳಿದರು. “ನಮ್ಮ ಅಜೆಂಡಾ ಸ್ಪಷ್ಟವಿದೆ, ರಸ್ತೆಗಳನ್ನು ಸ್ವಚ್ಛಗೊಳಿಸಿ ಮತ್ತು ಸರಿ ಮಾಡಿಸಿ” ಎಂದು ಅವರು ಹೇಳಿದರು.

Comments (0)

Your email address will not be published. Required fields are marked *

Back to top button