ಕ್ರೈಂ ಸ್ಟೋರಿಜಿಲ್ಲೆ

ಆನೇಕಲ್ ಕಿಡ್ನ್ಯಾಪ್ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್;ಎಂಟು ಆರೋಪಿಗಳು ಅರೆಸ್ಟ್!

ಆನೇಕಲ್: ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅವರ ಅಪಹರಣ ಮತ್ತು ಹತ್ಯೆ ಪ್ರಕರಣವು ಸಿನಿಮಾ ಸ್ಟೈಲ್‌ನಲ್ಲಿ ನಡೆದ ದ್ವೇಷದ ಕಥೆಯಾಗಿದ್ದು, ಇದೀಗ ಪೊಲೀಸರು ಈ ಪ್ರಕರಣದ ಎಲ್ಲಾ ಎಂಟು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಈ ಕೊಲೆಗೆ ಕೇವಲ ರಿಯಲ್ ಎಸ್ಟೇಟ್ ವ್ಯವಹಾರದ ಪೈಪೋಟಿ ಮಾತ್ರವಲ್ಲದೆ, ಹತ್ತು ವರ್ಷಗಳ ಹಳೆಯ ಪ್ರೇಮ ವೈಫಲ್ಯದ ದ್ವೇಷವೂ ಕಾರಣವಾಗಿರುವುದು ತನಿಖೆಯಲ್ಲಿ ಬಯಲಾಗಿದೆ.

ಮೃತ ಗೋಪಾಲ್ ಮತ್ತು ಪ್ರಮುಖ ಆರೋಪಿ ಮೋಹನ್ ಬಾಬು ಹಿಂದೆ ಆತ್ಮೀಯ ಸ್ನೇಹಿತರಾಗಿದ್ದರು, ಆದರೆ ಸ್ವಾತಿ ಎಂಬ ಯುವತಿಯನ್ನು ಗೋಪಾಲ್ ವಿವಾಹವಾಗಿದ್ದು ಇಬ್ಬರ ನಡುವೆ ಬದ್ಧ ವೈಷಮ್ಯಕ್ಕೆ ನಾಂದಿ ಹಾಡಿತ್ತು.ಮಾರ್ಚ್ 8 ರಂದು ಗೋಪಾಲ್ ಅವರು ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮ ಮುಗಿಸಿ ಬರುತ್ತಿದ್ದಾಗ ಕರ್ಪೂರು ಬಳಿ ಸಂಚು ರೂಪಿಸಿದ್ದ ಆರೋಪಿಗಳು, ಅಪಘಾತದ ನಾಟಕವಾಡಿ ಅವರ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಅಪಹರಿಸಿದ್ದರು. ಈ ಕೃತ್ಯಕ್ಕಾಗಿ ಮೋಹನ್ ಬಾಬು ಸುಮಾರು 25 ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಎಂಬ ಆಘಾತಕಾರಿ ಸತ್ಯಾಂಶ ಹೊರಬಂದಿದೆ. ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ಬರ್ಬರವಾಗಿ ಹತ್ಯೆಗೀಡಾದ ಗೋಪಾಲ್ ಶವ ಪತ್ತೆಯಾದ ನಂತರ ಆನೇಕಲ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆನೇಕಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಮೋಹನ್ ಬಾಬು ಸೇರಿದಂತೆ ತೇಜಸ್, ದರ್ಶನ್, ಲಿಖಿತ್, ನಿಖಿಲ್, ಆನಂದ್ ಮತ್ತು ಪ್ರಶಾಂತ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಅಪ್ರಾಪ್ತ ಹುಡುಗನೂ ಸೇರಿದ್ದಾನೆ ಎನ್ನುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಕೃತ್ಯಕ್ಕೆ ಬಳಸಿದ್ದ ಹುಂಡೈ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Comments (0)

Your email address will not be published. Required fields are marked *

Back to top button