ಕೋಲಾರ: 2023 ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಇಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ಶಾಸಕರಾಗಿರುವ ಕಾಂಗ್ರೆಸ್‌ನ ಕೆವೈ ನಂಜೇಗೌಡ ಆಯ್ಕೆ ಅಸಿಂಧು ಎಂದು ಹೈಕೋರ್ಟ್ ಆದೇಶ ನೀಡಿದ್ದು, ನಾಲ್ಕು ವಾರದ ಒಳಗೆ ಮರು ಮತಎಣಿಕೆ ಮಾಡಿ ಚುನಾವಣಾ ಫಲಿತಾಂಶ ಪ್ರಕಟಿಸುವಂತೆ ಕೋರ್ಟ್ ಆದೇಶದಲ್ಲಿ ತಿಳಿಸಿದೆ..
ಕೆವೈ ನಂಜೇಗೌಡ ಆಯ್ಕೆ ವಿರುದ್ಧ ಪರಾಜಿತ ಬಿಜೆಪಿ ಅಭ್ಯರ್ಥಿ ಕೆಎಸ್ ಮಂಜುನಾಥಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಮತಎಣಿಕೆಯಲ್ಲಿ ಲೋಪವಾಗಿದ್ದು, ಮತ್ತೊಮ್ಮೆ ಮರು ಮತಎಣಿಕೆಗೆ ಆದೇಶ ನೀಡುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿರೋ ಕೋರ್ಟ್, ಇಂದು ತೀರ್ಪು ಪ್ರಕಟಿಸಿದೆ.
ಮಾಲೂರು ಶಾಸಕರಾಗಿ ಕೆ.ವೈ.ನಂಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಿದ ಬಳಿಕ ಆ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಹೀಗಾಗಿ ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸುವವರೆಗೂ ಆದೇಶ ಜಾರಿ ಮಾಡಬಾರದೆಂದು ಕೆ.ವೈ.ನಂಜೇಗೌಡ ಪರ ವಕೀಲರು ಹೈಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.
ಹೀಗಾಗಿ ಶಾಸಕ ಕೆ.ವೈ.ನಂಜೇಗೌಡಗೆ 30 ದಿನಗಳ ತಾತ್ಕಾಲಿಕ ರಿಲೀಫ್ ಅನ್ನು ಹೈಕೋರ್ಟ್ ನೀಡಿದೆ. ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆಗೆ ಅವಕಾಶವನ್ನು ಹೈಕೋರ್ಟ್ ನೀಡಿದೆ. 30 ದಿನಗಳವರೆಗೆ ತನ್ನದೇ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾ.ಆರ್.ದೇವದಾಸ್ ಅವರ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ.


