ಜಿಲ್ಲೆಮನರಂಜನೆವೈರಲ್ ನ್ಯೂಸ್ಸುದ್ದಿ

ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ‘ಮದುಮಗಳಾದ’ ಬಿಗ್ ಬಾಸ್ ಮಲ್ಲಮ್ಮ

ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಮಲ್ಲಮ್ಮ, ಇದೀಗ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕಲರ್ಸ್ ಕನ್ನಡದ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಗಿಚ್ಚಿ ಗಿಲಿಗಿಲಿ’ ವೇದಿಕೆಯ ಮೇಲೆ ಮಲ್ಲಮ್ಮ ಮದುಮಗಳ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರನ್ನು ಮತ್ತು ತೀರ್ಪುಗಾರರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

ಬಿಗ್ ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿದ್ದ ಮಲ್ಲಮ್ಮ ತಮ್ಮ ಮುಗ್ಧ ಮಾತುಗಳು ಹಾಗೂ ಸಹಜ ವರ್ತನೆಯಿಂದಲೇ ವೀಕ್ಷಕರ ಮನ ಗೆದ್ದವರು. ಬಿಗ್ ಬಾಸ್ ಮನೆಯಲ್ಲಿ ಯಾವುದೇ ವಿವಾದಗಳಿಗೆ ಸಿಲುಕದೆ, ಅಲ್ಪ ಅವಧಿಯಲ್ಲೇ ಹೊರಬಂದರೂ ಅವರು ಗಳಿಸಿದ ಜನಪ್ರಿಯತೆ ಮಾತ್ರ ಅಪಾರ. ಪತಿಯನ್ನು ಕಳೆದುಕೊಂಡು, ಬಡತನದ ಬೇಗೆಯಲ್ಲಿದ್ದರೂ ಎದೆಗುಂದದೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದ ಮಲ್ಲಮ್ಮ, ಈಗ ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಅಪ್ಪಟ ಮನರಂಜನೆ ನೀಡುತ್ತಿದ್ದಾರೆ.

ಇತ್ತೀಚಿನ ಸಂಚಿಕೆಯ ಸ್ಕಿಟ್‌ವೊಂದರಲ್ಲಿ ಮಲ್ಲಮ್ಮ ಅವರನ್ನು ಮದುಮಗಳಂತೆ ಶೃಂಗರಿಸಲಾಗಿತ್ತು. ವಿಶೇಷವೆಂದರೆ, ಅವರಿಗಿಂತ ವಯಸ್ಸಿನಲ್ಲಿ ತೀರಾ ಚಿಕ್ಕದಾದ ಬಾಲಕಿಯೊಬ್ಬಳು ಈ ಸ್ಕಿಟ್‌ನಲ್ಲಿ ಮಲ್ಲಮ್ಮನ ತಾಯಿಯ ಪಾತ್ರ ನಿರ್ವಹಿಸಿರುವುದು ಹಾಸ್ಯದ ಮೆರಗು ಹೆಚ್ಚಿಸಿತ್ತು. ವೇದಿಕೆಯ ಮೇಲೆ ಮಲ್ಲಮ್ಮ ಹೇಳಿದ ಸಂಭಾಷಣೆಗಳು ತೀರ್ಪುಗಾರರಾದ ಶ್ರುತಿ ಮತ್ತು ಸಾಧು ಕೋಕಿಲ ಅವರನ್ನು ಬಿದ್ದು ಬಿದ್ದು ನಗುವಂತೆ ಮಾಡಿತು

“ಅಮ್ಮಾ, ನನಗೆ ಇನ್ನೂ ಆರು ವರ್ಷ ಮದುವೆ ಬೇಡ ಅಂದಿದ್ದೆ ಅಲ್ವಾ? ಇಷ್ಟು ಚಿಕ್ಕ ವಯಸ್ಸಿಗೆ ನನಗೆ ಯಾಕೆ ಮದುವೆ ಮಾಡಿಸ್ತಿದ್ದೀಯಾ?” ಎಂದು ಮಲ್ಲಮ್ಮ ಆ ಪುಟ್ಟ ಬಾಲಕಿಯನ್ನು ಪ್ರಶ್ನಿಸಿದಾಗ ಇಡೀ ಸೆಟ್ ನಗೆಗಡಲಲ್ಲಿ ಮುಳುಗಿತು. “ಒತ್ತಾಯಪೂರ್ವಕವಾಗಿ ನನ್ನ ಮದುವೆ ಮಾಡಿಸಬೇಡಿ” ಎಂದು ಮಲ್ಲಮ್ಮ ತಮ್ಮದೇ ಶೈಲಿಯಲ್ಲಿ ವಿನಂತಿಸಿಕೊಂಡಿದ್ದು ಸ್ಕಿಟ್‌ನ ಹೈಲೈಟ್ ಆಗಿತ್ತು.

ಮಲ್ಲಮ್ಮನ ಕಾಮಿಡಿ ಪಂಚ್‌ಗಳಿಗೆ ಹಿರಿಯ ನಟಿ ಶ್ರುತಿ ಹಾಗೂ ಹಾಸ್ಯ ನಟ ಸಾಧು ಕೋಕಿಲ ಸುಸ್ತಾಗಿ ಹೋಗಿದ್ದಾರೆ. ಕೇವಲ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಉಳಿಯದೆ, ವೃತ್ತಿಪರ ಹಾಸ್ಯ ನಟರ ಜೊತೆಗೂ ಹೆಜ್ಜೆ ಹಾಕುತ್ತಿರುವ ಮಲ್ಲಮ್ಮನ ಟ್ಯಾಲೆಂಟ್ ಕಂಡು ವೀಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬದುಕಿನ ಕಷ್ಟಗಳನ್ನು ಬದಿಗಿಟ್ಟು ಇತರರನ್ನು ನಗಿಸುವ ಮಲ್ಲಮ್ಮನ ಈ ಹಾದಿ ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ಬಿಗ್ ಬಾಸ್ ನಂತರವೂ ಅವರ ಈ ಯಶಸ್ಸಿನ ಪಯಣ ಮುಂದುವರಿಯುತ್ತಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

Comments (0)

Your email address will not be published. Required fields are marked *

Back to top button