25 ಲಕ್ಷಕ್ಕೆ ಸುಪಾರಿ; ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್ ಮಾಡಿ ಭೀಕರ ಹತ್ಯೆ!

ಬೆಂಗಳೂರು: ಆನೇಕಲ್ ಭಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ಪೈಪೋಟಿ ವಿಕೋಪಕ್ಕೆ ತಿರುಗಿದ್ದು, ಸುಪಾರಿ ಹಂತಕರಿಂದ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ನಿನ್ನೆ ಆನೇಕಲ್ನ ಕರ್ಪೂರು ಗೇಟ್ ಬಳಿ ಅಪಹರಣಕ್ಕೊಳಗಾಗಿದ್ದ ಏಜೆಂಟ್ ಗೋಪಾಲ್ ಅಲಿಯಾಸ್ ಗೋಪಿ, ಇಂದು ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೀವ್ರ ಪೈಪೋಟಿ ನಡೆಸುತ್ತಿದ್ದ ಮತ್ತೊಬ್ಬ ಏಜೆಂಟ್ ಮೋಹನ್ ಎಂಬಾತನೇ ಈ ಹತ್ಯೆಗೆ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. ಗೋಪಾಲ್ನನ್ನು ಮುಗಿಸಲು ಮೋಹನ್ ಬರೋಬ್ಬರಿ 25 ಲಕ್ಷ ರೂಪಾಯಿ ಸುಪಾರಿ ನೀಡಿದ್ದು, ಸುಪಾರಿ ಪಡೆದ ದುಷ್ಕರ್ಮಿಗಳು ನಿನ್ನೆ ಸಂಜೆ ಅಪಹರಣ ಮಾಡಿದ್ದರು. ನಂತರ ಗೋಪಾಲ್ನನ್ನು ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಕೊಚ್ಚಿ ಕೊಲೆ ಮಾಡಿ, ಶವವನ್ನು ನೆರೆಯ ತಮಿಳುನಾಡಿನ ಗಡಿ ಭಾಗದಲ್ಲಿ ಎಸೆದು ಪರಾರಿಯಾಗಿದ್ದಾರೆ.
ಈ ಭೀಕರ ಘಟನೆಯು ಆನೇಕಲ್ ಮತ್ತು ಸುತ್ತಮುತ್ತಲಿನ ರಿಯಲ್ ಎಸ್ಟೇಟ್ ವಲಯದಲ್ಲಿ ಭಾರಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸುಪಾರಿ ನೀಡಿದ ಮೋಹನ್ ಮತ್ತು ಕೃತ್ಯ ಎಸಗಿದ ಹಂತಕರಿಗಾಗಿ ಬಲೆ ಬೀಸಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾದ ಕರಾಳ ಮುಖ ಈ ಘಟನೆಯ ಮೂಲಕ ಮತ್ತೊಮ್ಮೆ ಅನಾವರಣಗೊಂಡಿದೆ.




