ಬೆಂಗಳೂರು: ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಬೆಂಗಳೂರಿನ ಬಗ್ಗೆ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದ ಇನ್‌ಫ್ಲ್ಯುನ್ಸರ್ ಸುಗಂಧ್ ಶರ್ಮಾ ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಐ ಲವ್ ಬೆಂಗಳೂರು, ನಾನು ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಕೋರಮಂಗಲ ಪ್ರದೇಶದಲ್ಲಿ ಚಿತ್ರೀಕರಿಸಲಾದ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ, ಇನ್‌ಫ್ಲ್ಯುನ್ಸರ್ ಸುಗಂಧ್ ಶರ್ಮಾ ಅವರು ಉತ್ತರ ಭಾರತೀಯರು ಬೆಂಗಳೂರು ತೊರೆದರೆ, ಪಿಜಿಗಳು ಖಾಲಿಯಾಗುತ್ತವೆ ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಕನ್ನಡಿಗರು ಸುಗಂಧ್ ಶರ್ಮಾ ಅವರ ಬಳಿ ಬೆಂಗಳೂರನ್ನು ಬಿಟ್ಟು ಹೋಗುವಂತೆ ಓಪನ್ ಆಗಿಯೇ ಚಾಲೆಂಜ್ ಹಾಕಿದ್ದರು. ವಿವಾದಿತ ರೀಲ್ಸ್‌ನಿಂದಾಗಿ ಸುಗಂಧ್ ಶರ್ಮಾ ತಾವು ಕೆಲಸ ಮಾಡುತ್ತಿದ್ದ ಕಂಪನಿಯಿಂದಲೂ ವಜಾಗೊಂಡಿದ್ದರು.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕರ್ನಾಟಕದ ಸೆಲೆಬ್ರಿಟಿಗಳು ಸೇರಿದಂತೆ ಹಲವರು ಈ ಹೇಳಿಕೆಯನ್ನು ವಿರೋಧಿಸಿ ಕಾಮೆಂಟ್ ಮಾಡಿದ್ದರು. ಸುಗಂಧ್ ಶರ್ಮಾ ರೀಲ್ಸ್‌ಗೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಇಷ್ಟೆಲ್ಲ ವಿವಾದ ಸೃಷ್ಟಿಸಿದ್ದ ಇನ್‌ಫ್ಲ್ಯುನ್ಸರ್ ಸುಗಂಧ್ ಶರ್ಮಾ ಈಗ ತಮ್ಮ ವರಸೆ ಬದಲಾಯಿಸಿ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ “ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ, ಐ ಲವ್ ಬೆಂಗಳೂರು ಎಂದು ವಿಡಿಯೋ ಮಾಡಿ ಹಾಕಿಕೊಂಡಿದ್ದಾರೆ. ನಾನೊಬ್ಬ ಟ್ರಾವೆಲರ್, ನಾನು ಎಲ್ಲಿ ಹೋದರೂ ಅಲ್ಲಿಯ ಸಂಸ್ಕೃತಿಯನ್ನು ಕಲಿಯಲು ಬಯಸುತ್ತೇನೆ. ನಾನು ಕನ್ನಡವನ್ನೂ ಕಲಿಯಲು ಹೃದಯದಿಂದ ಪ್ರಯತ್ನಿಸುತ್ತಿದ್ದೇನೆ. ನಾನು ಬೆಂಗಳೂರು ನಗರವನ್ನು, ಕರ್ನಾಟಕವನ್ನು ಬಹಳ ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ವಿವಾದಾತ್ಮಕ ರೀಲ್ಸ್‌ನಿಂದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿ, ಕೆಲಸವನ್ನೂ ಕಳೆದುಕೊಂಡ ಇನ್ ಫ್ಲ್ಯುಯನ್ಸರ್ ಸುಗಂಧ್ ಶರ್ಮಾ ಪರಿಸ್ಥಿತಿ ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತಾಗಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights