ಬೆಂಗಳೂರು: ಸೆ.22ರಂದು ಮಲ್ಲೇಶ್ವರಂನಲ್ಲಿ ಪಾರ್ಕ್‌ನ ಗೇಟ್ ಬಿದ್ದು ಬಾಲಕ ಮೃತಪಟ್ಟ ದುರ್ಘಟನೆಗೆ ಸರ್ಕಾರ, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರಂನಲ್ಲಿ ಆಟದ ಮೈದಾನದ ಗೇಟ್ ತಲೆಗೆ ಬಿದ್ದು ಪ್ರಾಣ ಕಳೆದುಕೊಂಡ ಬಾಲಕನ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಡಾ. ಮುಖ್ಯಮಂತ್ರಿ ಚಂದ್ರು ಅವರು, ಒಂದೇ ಕಡೆ ಗೇಟ್ ಅಳವಡಿಕೆ ಮಾಡಲು ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಮೊದಲನೇ ಟೆಂಡರ್ 50 ಲಕ್ಷ ರೂ., ಎರಡನೇ ಟೆಂಡರ್ 60 ಲಕ್ಷ ರೂ., ಮೂರನೇ ಟೆಂಡರ್ ಕೂಡ 60 ಲಕ್ಷ ರೂ. ಒಟ್ಟು 1.50 ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿ ಗೇಟ್ ಅಳವಡಿಸಲಾಗಿದೆ. ಇಷ್ಟು ಹಣ ಖರ್ಚು ಮಾಡಿದರು, ಉತ್ತಮ ಗುಣಮಟ್ಟದ ಗೇಟ್ ಅಳವಡಿಸಿಲ್ಲ ಎಂದರು.

ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಪೋಷಕರು ನೋವಿನಲ್ಲಿದ್ದಾರೆ. ಪರಿಹಾರ ಎಂದು ಒಂದಷ್ಟು ಹಣ ಕೊಟ್ಟರೂ, ಮಗನನ್ನು ತಂದುಕೊಡಲು ಆಗುತ್ತಾ ಎಂದು ಪ್ರಶ್ನೆ ಮಾಡಿದ ಅವರು, 1.5 ಕೋಟಿ ಜನಸಂಖ್ಯೆ ಇರುವ ಬೆಂಗಳೂರು ನಗರದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಸರ್ಕಾರ ಗಮನ ಕೊಡಬೇಕು, ಪಾರ್ಕ್‌ಗಳಿಗೆ ಗೇಟ್‌ ಅವಶ್ಯಕತೆ ಇಲ್ಲ, ವಾಹನ ಒಳಗಡೆ ಹೋಗದಂತೆ ಕಲ್ಲುಗಳನ್ನು ನೆಟ್ಟರೂ ಸಾಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ದುಡ್ಡು ಮಾಡಲು ಇಂತಹ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಪಾರ್ಕ್, ಸ್ಮಶಾನ, ವಾಕಿಂಗ್ ಜಾಗಗಳು, ಸಮುದಾಯ ಭವನಗಳಲ್ಲಿ ಅಳವಡಿಸಿರುವ ದೊಡ್ಡ ಗೇಟ್‌ಗಳನ್ನು ತೆರವುಗೊಳಿಸಿ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೃತಪಟ್ಟಿರುವ ಬಾಲಕನ ಕುಟುಂಬಕ್ಕೆ ಬಿಬಿಎಂಪಿ, ಶಾಸಕರು, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಕೊಡಬೇಕು ಎಂದರು.

ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, ಭವಿಷ್ಯವನ್ನು ರೂಪಿಸಿಕೊಂಡು, ದೇಶದ ಉತ್ತಮ ಪ್ರಜೆಯಾಗಬೇಕಿದ್ದ ಜೀವವೊಂದು ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ ಎನ್ನುವುದೇ ಬೇಸರದ ಸಂಗತಿ. ಆಟದ ಮೈದಾನಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಆದರೆ ಬಿಬಿಎಂಪಿ ಮೈದಾನಗಳ ನಿರ್ಮಾಣ, ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿಸಿದೆ. ಬಿಬಿಎಂಪಿ ಅಧಿಕಾರಿಗಳು, ಗುತ್ತಿಗೆದಾರರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದರು.

ಆಮ್ ಆದ್ಮಿ ಪಾರ್ಟಿ ಮುಖಂಡರಾದ ಉಷಾ ಮೋಹನ್ ಮಾತನಾಡಿ, ಘಟನೆ ನಡೆದಾಗ ನಾನು ಸ್ಥಳದಲ್ಲಿದ್ದೆ, ಪಾರ್ಕಿನ ವಿಚಾರವಾಗಿ ಈ ಹಿಂದೆ ಕೂಡ ಹೋರಾಟ ಮಾಡಿದ್ದರೂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿಲ್ಲ. ಟೆಂಡರ್ ಮುಖಾಂತರ ಕಾಮಗಾರಿಗಳನ್ನು ನಡೆದಾಗ ಸ್ಥಳೀಯರಿಂದ ಎನ್‌ಒಸಿ ಪಡೆದು ಹಣ ಬಿಡುಗಡೆ ಮಾಡಿ ಎಂದು ಬಿಬಿಎಂಪಿಗೆ ಆಗ್ರಹಿಸಿದರು. ಆಮ್ ಆದ್ಮಿ ಪಕ್ಷವು ಬೆಂಗಳೂರಿನಲ್ಲಿರುವ ಎಲ್ಲಾ ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಸಾಮಾಜಿಕ ಗಣತಿಯ ಮೂಲಕ ಪರಿಶೀಲನೆ ಮಾಡಿ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸವನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಿದೆ , ಸಮಸ್ಯೆ ಸರಿಪಡಿಸದೇ ಇದ್ದರೆ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಮುಖಂಡರುಗಳಾದ ಅನಿಲ್ ನಾಚಪ್ಪ, ಪುಷ್ಪ ಕೇಶವ್, ಪುಟ್ಟಣ್ಣ ಗೌಡ ಸೇರಿದಂತೆ ಸ್ಥಳೀಯ ನಿವಾಸಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

By Veeresh

Leave a Reply

Your email address will not be published. Required fields are marked *

Verified by MonsterInsights