ಬೆಂಗಳೂರು: ರಾಜ್ಯದ 18 ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಿಗೆ 114 ಮಾಡ್ಯುಲರ್ ಆಪರೇಷನ್ ಥಿಯೇಟರ್ ಉಪಕರಣ ಖರೀದಿಸುವ ಪ್ರಕ್ರಿಯೆಯಲ್ಲಿ ಬಹುಕೋಟಿ ರೂ.ಗಳ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಸ್ಫೋಟಗೊಂಡಿದೆ.
ಈ ವಿಚಾರವನ್ನು ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಅವ್ಯವಹಾರದ ದಾಖಲೆಗಳ ಸಹಿತ ರಾಜ್ಯಪಾಲರು ಹಾಗೂ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಲು ತೀರ್ಮಾನಿಸಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್ ದಾಖಲೆಗಳನ್ನು ಬಿಡುಗಡೆ ಮಾಡಿದರು. ಈ ಹಗರಣದ ನೈತಿಕ ಹೊಣೆ ಹೊತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ರಾಜೀನಾಮೆ ನೀಡಬೇಕು ಹಾಗೂ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಬಹು ಕೋಟಿ ರೂ.ಗಳ ಉಪಕರಣ ಪೂರೈಕೆ ಆದೇಶ ನೀಡಿದ್ದು, ಯಾರಿಗೆ ಎಷ್ಟು ಕಿಕ್ ಬ್ಯಾಕ್ ಸಂದಾಯವಾಗಿದೆ.
ಸಚಿವರು ಸೇರಿ ಯಾವೆಲ್ಲ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನುವ ಸತ್ಯಾಂಶ ನಿಷ್ಪಕ್ಷಪಾತ ತನಿಖೆಯಿಂದ ಗೊತ್ತಾಗಲಿದೆ ಎಂದು ಹೇಳಿದರು.
ರೋಗಿಗಳ ಆರೋಗ್ಯ ಸೇವೆಗಾಗಿ ಹಾವೇರಿ, ಕಲಬುರಗಿ, ಕೊಪ್ಪಳ, ಯಾದಗಿರಿ, ಬೆಂಗಳೂರು, ಮೈಸೂರು ಮತ್ತಿತರ 18 ವೈದ್ಯಕೀಯ ವಿಜ್ಷಾನಗಳ ಕಾಲೇಜುಗಳಿಗೆ 114 ಮ್ಯಾಡುಲರ್ ಆಪರೇಷನ್ ಥಿಯೇಟರ್ ಖರೀದಿಸಲಾಗಿದೆ. ಇದಕ್ಕಾಗಿ 176.78 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಉಪಕರಣ ಖರೀದಿಗೆ ಕರೆದಿದ್ದ ಟೆಂಡರ್ನಲ್ಲಿ ನಾಲ್ಕು ಸಂಸ್ಥೆಗಳು ಬಿಡ್ ಸಲ್ಲಿಸಿದ್ದವು.
ಇದರಲ್ಲಿ ಮೂರು ಸಂಸ್ಥೆಗಳ ಬಿಡ್ ತಿರಸ್ಕೃತವಾಗಿ ಲಕ್ಷ್ಮಣ್ಯ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ಗೆ ಪ್ರತಿ ಮಾಡ್ಯುಲರ್ ಆಪರೇಷನ್ ಥಿಯೇಟರ್ಗೆ ಜಿಎಸ್ಟಿ ಸೇರಿ ತಲಾ 1.52 ಕೋಟಿ ರೂ. ನಂತೆ ಪೂರೈಕೆ ಆದೇಶ ನೀಡಿದ್ದು, ಈ ಕಂಪನಿ ಒಂದು ವರ್ಷ ವಾರಂಟಿ ಕೊಟ್ಟಿದ. ಆದರೆ ಕೇರಳ ವೈದ್ಯಕೀಯ ಸೇವಾ ನಿಗಮದ ಕ್ರಿಯೇಟಿವ್ ಹೆಲ್ತ್ ಟೆಕ್ ಪ್ರೈವೇಟ್ ಲಿಮಿಟೆಡ್ ನವರು ಜಿಎಸ್ಟಿ ಸೇರಿ 49.70 ಲಕ್ಷ ರೂ., ಮೂರು ವರ್ಷಗಳ ವಾರಂಟಿ ನಮೂದಿಸಿತ್ತು. ಇದೇ ಸಂಸ್ಥೆ ಈ ಹಿಂದೆ 50 ಉಪಕರಣಗಳನ್ನು ನಮೂದಿತ ದರದಲ್ಲಿ ಪೂರೈಸಿದೆ. ಬೆಳಗಾವಿಯ ಸ್ಮಾರ್ಟ್ ಸಿಟಿ ಲಿಮಿಟೆಡ್ನ ಬಿಮ್ಸ್ ಆಸ್ಪತ್ರೆಯ ಟ್ರಾಮಾ ಸೆಂಟರ್ಗೆ ಮಾಡ್ಯುಲರ್ ಆಪರೇಷನ್ ಥಿಯೇಟರ್ಗಳನ್ನು ಶಿವೋನ್ ಇಂಡಿಯಾ ಕಂಪನಿಯು ಜಿಎಸ್ಟಿ ಸೇರಿ 1.10 ಕೋಟಿ ರೂ.ಗೆ ಪೂರೈಸಿದೆ ಎಂದು ರವಿಕುಮಾರ್ ವಿವರಿಸಿದರು.