
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸಾಂಸ್ಕೃತಿಕ ದಸರಾ ಹಬ್ಬವನ್ನು ಟರ್ಮಿನಲ್ 1 ಮತ್ತು 2 ನಲ್ಲಿ ಅಕ್ಟೋಬರ್ 11ರವರೆಗೆ ಅದ್ಧೂರಿಯಿಂದ ಆಚರಿಸಲಾಗುತ್ತಿದೆ.

ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ನಮ್ಮ ಹೆಮ್ಮೆಯ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಮ್ಮ ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನ, ಕೂಚಿಪುಡಿ, ಡೊಳ್ಳು ಕುಣಿತ, ತಮಟೆ ವಾದ್ಯ, ನಾಟ್ಯ, ಸಂಗೀತ ಕಚೇರಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಟರ್ಮಿನಲ್ ಒಂದು ಮತ್ತು ಎರಡರಲ್ಲಿ ನಡೆಸಲಾಗುತ್ತಿದೆ. ಈ ಎಲ್ಲಾ ಸಂಭ್ರಮಾಚರಣೆಯ ಭಾಗವಾಗಿ ಬೆಂಗಳೂರು ವಿಮಾನ ನಿಲ್ದಾಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಅ.8ರಂದು ಯಕ್ಷಗಾನ, ತಮಟೆವಾದ್ಯ ಜರುಗಿತು. ಜೊತೆಗೆ ಜಾನಪದ ಗಾಯನ ಮತ್ತು ನೃತ್ಯರೂಪಕ ವಿದ್ವಾನ್ ರೂಪಶ್ರೀ ಮಧುಸೂದನ್ ಅವರಿಂದ ನೃತ್ಯ ಮತ್ತು ಸಂಗೀತ ಕಲಾ ಪ್ರದರ್ಶನ ಜರುಗಿತು. ಇನ್ನು ನಾಡ ಸಂಸೃತಿಯನ್ನ ದೇಶ, ವಿದೇಶಗಳಿಗೆ ಪಸರಿಸುವ ನಿಟ್ಟಿನಲ್ಲಿ. ಚನ್ನಪಟ್ಟಣದ ಗೊಂಬೆಗಳ ಅಲಂಕಾರವನ್ನು ನೋಡಿ ವಿದೆಶಿಗರು ಮೂಕ ವಿಸ್ಮಿತರಾದರು. ಅಲ್ಲದೇ ಗೊಂಬೆಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ವಿದೇಶಿ ಪ್ರಯಾಣಿಕರು ಮುಗಿಬಿದ್ದರು.

ಅ.9ರಂದು ಕರ್ನಾಟಕ ಸಂಗೀತ ಹಾಗೂ ನೃತ್ಯ ರೂಪಕ, ಅ.10ರಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಕೂಚಿಪುಡಿ ನೃತ್ಯ ಪ್ರದರ್ಶನ, ಅ.11 ರಂದು ಬೊಂಬೆ ಪ್ರದರ್ಶನ ನಡೆಯಲಿದೆ. ಈ ಎಲ್ಲಾ ಸಾಂಪ್ರದಾಯಕ ಮನರಂಜನೆಯೊಂದಿಗೆ ದಸರಾ ಹಬ್ಬವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಣ್ತುಂಬಿಕೊಳ್ಳಬಹುದು.




