
ಬೆಂಗಳೂರು: ರಾಜಧಾನಿಯ ಚಿತ್ರಣವನ್ನೇ ಬದಲಿಸುವ ಬೃಹತ್ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸಂಚಾರ ದಟ್ಟಣೆ ಮುಕ್ತ ಬೆಂಗಳೂರಿಗಾಗಿ 40 ಕಿ.ಮೀ ಉದ್ದದ ಸುರಂಗ ಮಾರ್ಗ (Tunnel Road) ನಿರ್ಮಾಣಕ್ಕೆ ಅಧಿಕೃತ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಬಿಬಿಎಂಪಿಯನ್ನು ಐದು ಪ್ರತ್ಯೇಕ ಪಾಲಿಕೆಗಳನ್ನಾಗಿ ವಿಂಗಡಿಸಿದ ಬೆನ್ನಲ್ಲೇ, ಆ ಪಾಲಿಕೆಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಗಳ ಅನುದಾನ ಹರಿಸಲಾಗಿದೆ.
ಬಜೆಟ್‌ನ ಪ್ರಮುಖ ಮುಖ್ಯಾಂಶಗಳು:
- ಬೃಹತ್ ಸುರಂಗ ಮಾರ್ಗ: ಕೆ.ಆರ್.ಪುರಂನಿಂದ ಮೈಸೂರು ರಸ್ತೆವರೆಗೆ 40 ಕಿ.ಮೀ ಸುರಂಗ ರಸ್ತೆ ನಿರ್ಮಾಣ; ಮೊದಲ ಹಂತದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ 17 ಕಿ.ಮೀ ಉತ್ತರ-ದಕ್ಷಿಣ ಕಾರಿಡಾರ್!
- ಟ್ರಾಫಿಕ್ ಮುಕ್ತಿಗಾಗಿ ಟೆಂಡರ್: ಸುರಂಗ ಮಾರ್ಗ ಯೋಜನೆಗೆ 17,780 ಕೋಟಿ ರೂ. ಮೊತ್ತದ ಬೃಹತ್ ಟೆಂಡರ್ ಆಹ್ವಾನ.
- ಮೆಟ್ರೋ ವಿಸ್ತರಣೆ: ಮುಂದಿನ ಒಂದು ವರ್ಷದಲ್ಲಿ 41 ಕಿ.ಮೀ ಹೆಚ್ಚುವರಿ ಮೆಟ್ರೋ ಮಾರ್ಗ ನಿರ್ಮಾಣ; ಇದರಿಂದ ಪ್ರತಿದಿನ 15 ಲಕ್ಷ ಪ್ರಯಾಣಿಕರಿಗೆ ಅನುಕೂಲ.
- ಐದು ಪಾಲಿಕೆಗಳಿಗೆ ಅನುದಾನ: ವಿಭಜಿತ ಐದು ಪಾಲಿಕೆಗಳ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 1,233 ಕೋಟಿ ರೂ. ಹಾಗೂ ಉಪಮುಖ್ಯ ರಸ್ತೆಗಳಿಗೆ 1,936 ಕೋಟಿ ರೂ. ಮೀಸಲು.
- ಹೊರ ವರ್ತುಲ ರಸ್ತೆ: ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗಿನ ಔಟರ್ ರಿಂಗ್ ರೋಡ್ ಅಭಿವೃದ್ಧಿಗೆ 450 ಕೋಟಿ ರೂ. ಘೋಷಣೆ.
- ಕಾವೇರಿ 6ನೇ ಹಂತ: ನಗರದ ಕುಡಿಯುವ ನೀರಿನ ದಾಹ ನೀಗಿಸಲು 6,939 ಕೋಟಿ ರೂ. ವೆಚ್ಚದಲ್ಲಿ ಕಾವೇರಿ 6ನೇ ಹಂತದ ಯೋಜನೆ ಜಾರಿ.
- ರಾಜಕಾಲುವೆ ಮೇಲ್ದರ್ಜೆ: ಪ್ರವಾಹ ತಡೆಗಟ್ಟಲು ರಾಜಕಾಲುವೆಗಳ ನವೀಕರಣಕ್ಕಾಗಿ 273 ಕೋಟಿ ರೂ. ಅನುದಾನ.
- ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್: ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕವಾಗಿ 2 ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಪ್ರಾರಂಭ.




