ಬೆಂಗಳೂರು: ಬೆಂಗಳೂರಿನ ಕೆಂಗೇರಿ ಕೆರೆಯಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದ್ದು, ಈ ಪೈಕಿ ಮಂಗಳವಾರ ಒಂದು ಮೃತದೇಹ ಪತ್ತೆಯಾಗಿದೆ.
ಸೋಮವಾರ ಅಣ್ಣ ಶ್ರೀನಿವಾಸ್(13), ತಂಗಿ ಲಕ್ಷ್ಮೀ(11) ನಾಪತ್ತೆಯಾಗಿದ್ದರು. ಕೆಂಗೇರಿ ಕೆರೆಯಲ್ಲಿ ಮಕ್ಕಳು ಬಿದ್ದಿರುವ ಶಂಕೆ ಹಿನ್ನೆಲೆ ಇಂದು ಬೆಳಗ್ಗೆ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ಆರಂಭ ಮಾಡಿದ್ದರು. ಸುಮಾರು 3 ಗಂಟೆಗಳಿಂದ ಸತತ ಕಾರ್ಯಾಚರಣೆ ನಡೆಸಿ, ಅಣ್ಣ ಜಾನ್ ಸೀನಾ ಮೃತ ದೇಹ ಪತ್ತೆಯಾಗಿದ್ದು, ತಂಗಿ ಲಕ್ಷ್ಮೀ ನಾಪತ್ತೆಯಾಗಿದ್ದು, ಶೋಧಕಾರ್ಯ ನಡೆಯುತ್ತಿದೆ.
ಪ್ರಕರಣ ಏನು?
ಕೆಂಗೇರಿ ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಎಂಬುವರ ಮಕ್ಕಳಾದ ಶ್ರೀನಿವಾಸ್ ಮತ್ತು ಲಕ್ಷ್ಮೀ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಕೆಂಗೇರಿ ಕೆರೆಗೆ ನೀರು ತರಲು ಹೋಗಿದ್ದರು. ನೀರು ತರಲು ಹೋದವರು ಕೆರೆ ಬಳಿ ಆಟವಾಡುತ್ತಿದ್ದರು. ಆಟವಾಡುತ್ತಾ ಆಯತಪ್ಪಿ ಕೆಂಗೇರಿ ಕೆರೆಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಕೆರೆಯ ದಂಡೆ ಮೇಲೆ ಮಕ್ಕಳ ಬಟ್ಟೆ ಮತ್ತು ಬಿಂದಿಗೆ ಪತ್ತೆಯಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೋಲಿಸರು ದೌಡಾಯಿಸಿದ್ದು, ಶೋಧಕಾರ್ಯ ನಡೆಯುತ್ತಿದೆ. ಕೆಂಗೇರಿ ಕೆರೆ ಬಳಿ ನಾಗಮ್ಮ ಅವರ ಆಕ್ರಂದನ ಮುಗಿಲು ಮುಟ್ಟಿದೆ.
ನಾಗಮ್ಮ ಬಿಬಿಎಂಪಿಯಲ್ಲಿ ಕಸ ವಿಂಗಡಣೆ ಕೆಲಸ ಮಾಡುತ್ತಿದ್ದಾರೆ. ನಾಗಮ್ಮ ತನ್ನ ಇಬ್ಬರು ಮಕ್ಕಳು ಮತ್ತು ಸಹೋದರಿ ಧನಲಕ್ಷ್ಮೀ ಜೊತೆಗೆ ವಾಸವಾಗಿದ್ದರು. ಜ್ಞಾನ ಭಾರತಿ ಅಗ್ನಿ ಶಾಮಕ ದಳದ ಆರು ಮಂದಿ ಸಿಬ್ಬಂದಿಯಿಂದ ಕೆಂಗೇರಿ ಕೆರೆಯಲ್ಲಿ ಬೋಟ್ ಬಳಸಿ ಕಾರ್ಯಾಚರಣೆ ನಡೆಯುತ್ತಿದೆ. 12 ಗಂಟೆ ನಂತರ ಬೋರ್‌ವೆಲ್‌ಗಳಲ್ಲಿ ಬಳಸುವ ಕ್ಯಾಮರಾ ಮೂಲಕ ಕಾರ್ಯಾಚರಣೆ ನಿರ್ಧರಿಸಲಾಗಿದೆ.
ಮೂರು ಹಂತದಲ್ಲಿ ಕಾರ್ಯಾಚರಣೆಗೆ ನಿರ್ಧಾರ ಮಾಡಲಾಗಿದೆ. ಮೊದಲ ಹಂತ ಗ್ರಾಪ್ ನೇಲ್ ಮೂಲಕ ಕಾರ್ಯಾಚರಣೆ, ಎರಡನೇ ಹಂತದಲ್ಲಿ ಬೋರ್ ವೆಲ್ ಕ್ಯಾಮರಾ, ಮೂರನೇ ಹಂತದದಲ್ಲಿ ಅಂಡರ್ ವಾಟರ್ ಕ್ಯಾಮರಾ ಬಳಸಿ ಶೋಧ ಕಾರ್ಯನಡೆಸಲಾಗುವುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಸುಮಾರು 15 ಜನರ ತಂಡದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. ಜ್ಞಾನಭಾರತಿ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಕೆಂಗೇರಿ ಪೊಲೀಸ್ ಸಿಬ್ಬಂದಿ, ಸಿವಿಲ್ ಡಿಫೆನ್ಸ್ನಿಂದ ಕಾರ್ಯಾಚರಣೆ ನಡೆಯುತ್ತಿದೆ. ಮಧ್ಯಾಹ್ನದ ನಂತರ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳ್ಳಲಿದೆ.