ಬೆಂಗಳೂರು: ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ನಡೆದ ಘಟನೆ ದೇಶಾದ್ಯಂತ ಚರ್ಚೆ ಚರ್ಚೆಗೆ ಒಳಪಟ್ಟಿದೆ. ಪರಿಶಿಷ್ಟ ಜಾತಿ ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದು ಖಂಡನಾರ್ಹ ಮತ್ತು ಖೇದಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕರಾದ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಸಂತ್ರಸ್ತೆಯನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿಲ್ಲ. ಗೃಹ ಸಚಿವರು ಹೊರತುಪಡಿಸಿ ಬೇರೆ ಯಾರೂ ಭೇಟಿ ಕೊಟ್ಟಿಲ್ಲ. ನಿನ್ನೆ ದಿನ ಹೈಕೋರ್ಟ್, ರಾಜ್ಯ ಸರಕಾರಕ್ಕೆ ಚಾಟಿ ಬೀಸಿದೆ. ಯಾಕೆ ಸರಕಾರ ಇದು ನಡೆಯಲು ಬಿಟ್ಟಿದೆ? ಪೊಲೀಸ್ ಗಸ್ತು ಯಾಕೆ ಇರಲಿಲ್ಲ? ರಾಜ್ಯ ಸರಕಾರ ಇಂಥ ಘಟನೆ ಆಗದಂತೆ ತಡೆಯಲು ಏನು ಕ್ರಮ ಕೈಗೊಂಡಿದೆ? ಎಂದು ಕೇಳಿದ್ದಾಗಿ ವಿವರಿಸಿದರು.
ಸಂತ್ರಸ್ತೆಯ ಸಹಾಯಕ್ಕೆ ಧಾವಿಸದ ಕುರಿತು ಚಾಟಿ ಬೀಸಿದೆ. ಆದರೂ, ರಾಜ್ಯ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಜನರಿಗೂ ಅನಿಸಿದೆ. ಈ ಘಟನೆಯನ್ನು ಖಂಡಿಸಿ ನಾಳೆ ದಿನ ಬಿಜೆಪಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ದೊಡ್ಡ ಪ್ರತಿಭಟನೆ ನಡೆಸಲಿದೆ. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುತ್ತಾರೆ. ಇವತ್ತು ಸಹ ಅಧಿವೇಶನ ಮುಗಿದ ಬಳಿಕ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ನಮ್ಮ ಪಕ್ಷದ ಮುಖಂಡರು, ಹಿರಿಯರು ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರಕಟಿಸಿದರು.
ನಾಳೆ ಕೇಂದ್ರದಿಂದ ಒಂದು ತಂಡವು ಬೆಳಗಾವಿಗೆ ಭೇಟಿ ಕೊಡಲಿದೆ. ಸಂಸದರಾದ ಅಪರಾಜಿತ್ ಸಾರಂಗಿ, ಸುನಿತಾ ದುಗ್ಗಲ್, ರಂಜಿತಾ ಕೋಹ್ಲಿ, ಲಾಕೆಟ್ ಚಟರ್ಜಿ ಅಲ್ಲದೆ ಕೇಂದ್ರ ಸಚಿವೆ ಆಶಾ ಲಾಕ್ಡಾ ಅವರು ಸಂತ್ರಸ್ತೆಯನ್ನು ಭೇಟಿ ಮಾಡುತ್ತಾರೆ. ಈ ವಿಷಯವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಾದ್ಯಂತ ಪ್ರತಿಭಟನೆಗೆ ಮುಂದಾಗಿದೆ ಎಂದು ತಿಳಿಸಿದರು. ಶಾಸಕರಾದ ಧೀರಜ್ ಮುನಿರಾಜು, ಚಂದ್ರು ಲಮಾಣಿ ಅವರು ಉಪಸ್ಥಿತರಿದ್ದರು.