ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದವು ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಿರ್ಣಾಯಕ ಘಟ್ಟಕ್ಕೆ ತಲುಪಲಿದ್ದು, ಬೆಳಗಾವಿ ಸೇರಿದಂತೆ ಕರ್ನಾಟಕದ 865 ಗ್ರಾಮಗಳು ತನಗೆ ಸೇರಬೇಕು ಎಂದು ಆಗ್ರಹಿಸಿ ಮಹಾರಾಷ್ಟ್ರ ಸರ್ಕಾರ 22 ವರ್ಷಗಳ ಹಿಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದ್ದು, ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.
ಮಹಾರಾಷ್ಟ್ರ ಸಲ್ಲಿಸಿರುವ ಈ ಅರ್ಜಿಯು ವಿಚಾರಣೆಗೆ ಅರ್ಹವೇ ಅಥವಾ ಇಲ್ಲವೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಈ ಕಾನೂನು ಸಮರದಲ್ಲಿ ಮಹಾರಾಷ್ಟ್ರದ ವಾದವನ್ನು ತಡೆಹಿಡಿಯಲು ಕರ್ನಾಟಕದ ಕಾನೂನು ತಜ್ಞರ ತಂಡ ಸನ್ನದ್ಧವಾಗಿದ್ದು, ನ್ಯಾಯವಾದಿ ನಿಶಾಂತ್ ಪಾಟೀಲ್ ಕರ್ನಾಟಕದ ಪರವಾಗಿ ವಕಾಲತ್ತು ವಹಿಸಲಿದ್ದಾರೆ.
ಪ್ರಕರಣದ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾರಾಷ್ಟ್ರ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. “ಗಡಿ ರೇಖೆಯನ್ನು ಗುರುತಿಸುವ ಪರಮಾಧಿಕಾರ ಇರುವುದು ಕೇವಲ ದೇಶದ ಸಂಸತ್ತಿಗೆ ಮಾತ್ರ. ಇದು ಸುಪ್ರೀಂ ಕೋರ್ಟ್‌ನ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ನಮ್ಮ ಪ್ರಬಲ ವಾದ. ಹೀಗಾಗಿ ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿಯನ್ನೇ ವಜಾಗೊಳಿಸುವಂತೆ ನಾವು ಮನವಿ ಮಾಡಲಿದ್ದೇವೆ,” ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ವಿಚಾರಣೆಯ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳಲ್ಲಿ ಮತ್ತು ಗಡಿ ಭಾಗಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಮತ್ತು ನಗರ ಪೊಲೀಸ್ ಪಡೆಗಳು ಕಟ್ಟೆಚ್ಚರ ವಹಿಸಿವೆ.
ಕಾನೂನು ಹೋರಾಟದ ಹಿನ್ನೆಲೆ: ಬೆಳಗಾವಿ ಸೇರಿ ಕರ್ನಾಟಕದ ಗಡಿ ಭಾಗದ ಪಟ್ಟಣಗಳು ತನಗೆ ಸೇರಬೇಕೆಂದು ಮಹಾರಾಷ್ಟ್ರ ಹಠ ಹಿಡಿದಿದೆ. ಆದರೆ, ಭಾಷಾವಾರು ಪ್ರಾಂತ್ಯ ರಚನೆಯ ಆಧಾರದ ಮೇಲೆ ಮಹಾಜನ್ ವರದಿ ಅಂತಿಮ ಎಂದು ಕರ್ನಾಟಕ ಪ್ರತಿಪಾದಿಸುತ್ತಾ ಬಂದಿದೆ. ಇಂದು ಸುಪ್ರೀಂ ಕೋರ್ಟ್ ತೆಗೆದುಕೊಳ್ಳುವ ನಿರ್ಧಾರವು ಉಭಯ ರಾಜ್ಯಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಲಿದೆ.


