ಬೆಳಗಾವಿ: ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಸಂಪರ್ಕಿಸುವ ರೈಲು ಹಳಿ ಪಕ್ಕ ಭೂ ಕುಸಿತವಾಗಿರುವ ಘಟನೆ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ.
ಕುಡಚಿ ಪಟ್ಟಣದ ಹೊರವಲಯದ ಹಳಿ ಪಕ್ಕವೇ ಭೂಕುಸಿತವಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು ಮಂಗಳವಾರ ಸಂಜೆ ದಿಢೀರ್ ಭೂಕುಸಿತದಿಂದ ಒಂದು ಲೈನ್‌ನಲ್ಲಿ ಸಂಚಾರ ಸ್ಥಗಿತಗೊಳಿಸಿ ಮತ್ತೊಂದು ಹಳಿಯ ಮೂಲಕ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಈ ಹಳಿಯಲ್ಲಿ ಕಡಿಮೆ ವೇಗದಲ್ಲಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಹಾರಾಷ್ಟ್ರದ ಮೀರಜ್-ಬೆಳಗಾವಿ ಮಾರ್ಗದಲ್ಲಿ ನಿತ್ಯ ಹಲವು ರೈಲುಗಳು ಸಂಚಾರ ನಡೆಸುತ್ತಿವೆ. ದಿಢೀರ್ ಭೂ ಕುಸಿತದಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಸ್ಥಳಕ್ಕೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.