ಗೃಹಬಳಕೆ ಸಿಲಿಂಡರ್ ಬಳಸಿದ್ರೆ ಹುಷಾರ್; ಹೋಟೆಲ್‌ಗಳ ಮೇಲೆ ಅಧಿಕಾರಿಗಳು ದಾಳಿ!

ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ನಡೆಸಿದ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ನೇರ ಪರಿಣಾಮ ಭಾರತದ ಮೇಲೂ ಆಗಿದ್ದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದೆ. ಇದರಿಂದಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಹಲವು ಹೋಟೆಲ್‌ಗಳು ಅನಿವಾರ್ಯವಾಗಿ ಬಾಗಿಲು ಮುಚ್ಚುತ್ತಿವೆ. ಹೋಟೆಲ್ ನಡೆಸಲೇಬೇಕಾದ ಅನಿವಾರ್ಯತೆಯಲ್ಲಿರುವ ಕೆಲವರು ಸೌದೆ ಒಲೆಗಳ ಮೊರೆ ಹೋಗಿದ್ದರೆ, ಇನ್ನು ಕೆಲವರು ಅಕ್ರಮವಾಗಿ ಗೃಹಬಳಕೆ ಸಿಲಿಂಡರ್‌ಗಳನ್ನು ಬಳಸುತ್ತಿದ್ದಾರೆ.
ಈ ಅಕ್ರಮ ಬಳಕೆಯ ದೂರುಗಳ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಚಿಕ್ಕಬಳ್ಳಾಪುರ ತಹಶೀಲ್ದಾರ್ ರಶ್ಮಿ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹೋಟೆಲ್ ಹಾಗೂ ಡಾಬಾಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಜಿಲ್ಲೆಯಾದ್ಯಂತ ಮಾರ್ಚ್ 20ರವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 135 ಗೃಹಬಳಕೆ ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ. ಗುಡಿಬಂಡೆ ತಾಲೂಕಿನಲ್ಲೂ ತಹಶೀಲ್ದಾರ್ ಸಿಬ್ಗುತ್ತಲ್ಲಾ ನೇತೃತ್ವದಲ್ಲಿ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ 45 ಸಿಲಿಂಡರ್‌ಗಳನ್ನು ಸೀಜ್ ಮಾಡಲಾಗಿದೆ.
ನಗರದ ಪ್ರಖ್ಯಾತ ಭಗವತಿ ಹೋಟೆಲ್‌ನಲ್ಲಿ ಹೆಚ್ಚಿನ ಸಂಖ್ಯೆಯ ಖಾಲಿ ವಾಣಿಜ್ಯ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿದ್ದನ್ನು ಪತ್ತೆಹಚ್ಚಿದ ಅಧಿಕಾರಿಗಳು, ನಿಯಮಬಾಹಿರವಾಗಿ ಇರಿಸಿಕೊಂಡಿದ್ದ ಆ ಸಿಲಿಂಡರ್‌ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ. ಇದರಿಂದ ಅಸಮಾಧಾನಗೊಂಡ ಹೋಟೆಲ್ ಮಾಲೀಕರು, “ಒಂದೆಡೆ ವಾಣಿಜ್ಯ ಸಿಲಿಂಡರ್ ಸಿಗುತ್ತಿಲ್ಲ, ಇನ್ನೊಂದೆಡೆ ಇರುವುದನ್ನೂ ಅಧಿಕಾರಿಗಳು ಕಿತ್ತುಕೊಳ್ಳುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. ಯುದ್ಧದ ಕಿಚ್ಚು ಸಾವಿರಾರು ಕಿಲೋಮೀಟರ್ ದೂರದ ಚಿಕ್ಕಬಳ್ಳಾಪುರದ ಹೋಟೆಲ್ ಉದ್ಯಮದ ಬದುಕನ್ನು ಬೀದಿಗೆ ತಂದಿದೆ.




