Top Newsರಾಜ್ಯಸುದ್ದಿ

BBMPಯಿಂದ ದಾಖಲೆ 4,284 ಕೋಟಿ ರೂ.ತೆರಿಗೆ ಸಂಗ್ರಹ

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಬಾಕಿ ಪಾವತಿಗೆ ನೀಡಿದ್ದ ಒನ್ ಟೈಮ್ ಸೆಟ್ಲಮೆಂಟ್ ಅವಕಾಶ ಕೊನೆಗೊಂಡಿದ್ದು, ಒಟಿಎಸ್ ಪರಿಣಾಮ ಬಿಬಿಎಂಪಿಗೆ ದಾಖಲೆಯ 4,284 ಕೋಟಿ ರೂ. ಆಸ್ತಿ ತೆರಿಗೆ ವಸೂಲಿಯಾಗಿದೆ. ಈ ಮೂಲಕ ಪಾಲಿಕೆಯೂ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

2022-23ರಲ್ಲಿ 2,300 ಕೋಟಿ ರೂಪಾಯಿ ಮತ್ತು 2023-24ರಲ್ಲಿ 2293.81 ಕೋಟಿ ರೂಪಾಯಿಗಳನ್ನು ಪಾಲಿಕೆ ಸಂಗ್ರಹಿಸಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಆಸ್ತಿ ತೆರಿಗೆ ವಸೂಲಿಯಲ್ಲಿ ಗಮನಾರ್ಹ ಏರಿಕೆಯಾಗಿದೆ.

2024ರ ಬಜೆಟ್ ಮಂಡನೆ ವೇಳೆ ಬಿಬಿಎಂಪಿ 6,000 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ, ಒಟಿಎಸ್ ಯೋಜನೆ ಜಾರಿಯಾದ ಬಳಿಕ ಈ ಗುರಿಯನ್ನು 5,200 ಕೋಟಿ ರೂ.ಗೆ ಪರಿಷ್ಕರಿಸಲಾಗಿತ್ತು. ಮಾರ್ಚ್ 2025 ರ ಅಂತ್ಯದ ವೇಳೆಗೆ ನಿರೀಕ್ಷಿತ ಗುರಿಯನ್ನು ತಲುಪಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.ಏಪ್ರಿಲ್ 1 ರಿಂದ ನವೆಂಬರ್ 30 ರವರೆಗೆ 4,284.16 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಈ ಪೈಕಿ ಮಹದೇವಪುರ ವಲಯದಲ್ಲಿ ಅತೀ ಹೆಚ್ಚು 1,148 ಕೋಟಿ ರೂಪಾಯಿಗಳ ತೆರಿಗೆ ವಸೂಲಿ ಮಾಡಲಾಗಿದೆ.

ಪೂರ್ವ ವಲಯದಲ್ಲಿ 710 ಕೋಟಿ ರೂ, ದಕ್ಷಿಣ ವಲಯದಲ್ಲಿ 606 ಕೋಟಿ ರೂ, ಬಿಬಿಎಂಪಿ ಪಶ್ಚಿಮ ವಲಯ 483 ಕೋಟಿ, ಬೊಮ್ಮನಹಳ್ಳಿ ವಲಯ 418 ಕೋಟಿ, ಯಲಹಂಕ ವಲಯ 408 ಕೋಟಿ, ರಾಜರಾಜೇಶ್ವರಿ ನಗರ ವಲಯ 335 ಕೋಟಿ, ದಾಸರಹಳ್ಳಿ ವಲಯ 136 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button