Top Newsರಾಜ್ಯಸುದ್ದಿ

ಅನ್ಯ ಭಾಷಿಕರಿಗೆ ಬಿಬಿಎಂಪಿಯಿಂದ ಕನ್ನಡ ಕಲಿಸಲು ನಿರ್ಧಾರ

ಬೆಂಗಳೂರು: ನಮ್ಮ ರಾಜಧಾನಿಯಲ್ಲಿ ಕನ್ನಡಿಗರಿಗಿಂತ ಬೇರೆ ಭಾಷೆ ಮಾತನಾಡುವವರೇ ಹೆಚ್ಚು. ಭಾಷೆಯ ವಿಚಾರವಾಗಿ ಆಗಾಗ ಗಲಾಟೆಗಳು ಆಗುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ರಾಜಧಾನಿ ಬೆಂಗಳೂರಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ. ಅನ್ಯ ಭಾಷಿಕರೇ ತುಂಬಿರುವ ಬೆಂಗಳೂರಿನಲ್ಲಿ ಕನ್ನಡವನ್ನ ಉಳಿಸುವ, ಬೆಳೆಸುವ ಪ್ರಯತ್ನಕ್ಕೆ ಬಿಬಿಎಂಪಿ ಹಾಗೂ ಕನ್ನಡ ಪ್ರಾಧಿಕಾರ ಮುಂದಾಗಿದೆ. ನಗರದಲ್ಲಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಮಹತ್ವದ ತೀರ್ಮಾನವನ್ನು ಪಾಲಿಕೆ ಮತ್ತು ಕನ್ನಡ ಪ್ರಾಧಿಕಾರ ತೆಗೆದುಕೊಂಡಿದೆ.

ನಗರದಲ್ಲಿ ವಾರಕ್ಕೆ ಮೂರು ದಿನ ಒಂದೊಂದು ಗಂಟೆಯಂತೆ, ತಿಂಗಳಿಗೆ 36 ಘಂಟೆಗಳಲ್ಲಿ ಕನ್ನಡವನ್ನು ಕಲಿಸಿ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕಾಗಿ ಪಾಲಿಕೆಯ ಜೊತೆಯೂ ಕನ್ನಡ ಪ್ರಾಧಿಕಾರ ಮಾತುಕತೆ ನಡೆಸಿದೆ.

ದಿನನಿತ್ಯ ಬಳಸುವ ಕನ್ನಡ ಪದಗಳು, ವಾಕ್ಯಗಳನ್ನು ಸರಳವಾಗಿ ಹೇಳಿಕೊಡಲಾಗುತ್ತದೆ. ಕನ್ನಡ ಕಲಿಸಲು 75 ಶಿಕ್ಷಕರನ್ನ ಹೊರಗುತ್ತಿಗೆ ಆಧಾರದಲ್ಲಿ ಪಾಲಿಕೆ ನೇಮಕ ಮಾಡಿಕೊಳ್ಳಲಿದೆ. ಕನ್ನಡ ಪ್ರಾಧಿಕಾರದಿಂದಲೂ ಖಾಸಗಿ ಕಂಪನಿ, ಇತರೆ ಜಾಗಗಳಲ್ಲಿ ಕೆಲಸ ಮಾಡುವವರಿಗೆ ಕನ್ನಡ ಕಲಿಸುವ ಕೆಲಸವನ್ನು ಮಾಡಲಾಗುತ್ತದೆ. ಆಯಾ ಕಚೇರಿ, ಕಂಪನಿಗಳಲ್ಲಿ 30 ಜನರ ತಂಡ ಕನ್ನಡವನ್ನು ಕಲಿಯುತ್ತೇವೆ ಎಂದು ಪಾಲಿಕೆ, ಪ್ರಾಧಿಕಾರಕ್ಕೆ ತಿಳಿಸಿದರೆ ಆ ಜಾಗಕ್ಕೂ ಹೋಗಿ ಶಿಕ್ಷಕರು ಹೇಳಿಕೊಡುತ್ತಾರೆ. ಇದಕ್ಕೆ ಸಮ್ಮತಿ ಸೂಚಿಸಿರುವ ಬಿಬಿಎಂಪಿ, ಈ ಕುರಿತು ತನ್ನ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವ ನಿರ್ಧಾರಕ್ಕೆ ಬಂದಿದೆ.

Comments (0)

Your email address will not be published. Required fields are marked *

Back to top button