ಚಿಕ್ಕಬಳ್ಳಾಪುರ: ಯಾವುದೇ ಕಾರಣಕ್ಕೂ ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಅವಕಾಶ ನೀಡುವುದಿಲ್ಲ, ಇದಕ್ಕಾಗಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.
ಗೌರಿಬಿದನೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಎಸ್.ಆರ್. ವಿಶ್ವನಾಥ್, ವಿಷಯವು ಈಗಾಗಲೇ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ತೀರ್ಪಿಗಾಗಿ ಕಾಯಲಾಗುತ್ತಿದೆ. “ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ನಮಾಜ್ ಮಾಡಲು ಅವಕಾಶ ನೀಡದಿರುವವರು, ನಮ್ಮ ದಸರಾ ಉದ್ಘಾಟನೆಯನ್ನು ಹೇಗೆ ಮಾಡಬಹುದು ಎಂದು ಪ್ರಶ್ನಿಸಿದ್ದಾರೆ.ಇದು ಹಿಂದೂ ಸಮುದಾಯಕ್ಕೆ ದೊಡ್ಡ ಅವಮಾನ. ಅಜ್ಮೀರ್‌ನಲ್ಲಿ ದೊಡ್ಡ ಉತ್ಸವಗಳು ನಡೆಯುವಾಗ ಹಿಂದೂಗಳಿಗೆ ಉದ್ಘಾಟನೆಯ ಅವಕಾಶ ನೀಡುವುದಿಲ್ಲ, ಆದರೆ ಇಲ್ಲಿ ಅಲ್ಪಸಂಖ್ಯಾತರನ್ನು ತಂದು ದಸರಾ ಉದ್ಘಾಟನೆ ಮಾಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ, “ನಮ್ಮನ್ನು ಕೋಮುವಾದಿಗಳೆಂದು ಕರೆಯುವವರು ತಾವು ಯಾವ ವಾದಿಗಳು?” ಎಂದು ಪ್ರಶ್ನಿಸಿದ್ದಾರೆ. ಈ ಘಟನೆಯಿಂದ ಕಾಂಗ್ರೆಸ್ ಪಕ್ಷದ ಅವನತಿಯ ಆರಂಭವಾಗಿದೆ. “ಮಂಜುನಾಥ ಸ್ವಾಮಿ ಮತ್ತು ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಇಂತಹ ಕೃತ್ಯಗಳಿಗೆ ತಕ್ಕ ಶಿಕ್ಷೆಯಾಗಲಿದೆ” ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಕಿಡಿಕಾರಿದ್ದಾರೆ.