ಬೆಂಗಳೂರು: ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲು ಸಂಚಾರಕ್ಕೆ ಭರದಿಂದ ಸಿದ್ಧತೆ ಸಾಗುತ್ತಿದ್ದು, ಶೀಘ್ರವೇ ಚಾಲಕ ರಹಿತ ಮೆಟ್ರೋ ರೈಲು ಸಂಚರಿಸಲಿದೆ. ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಮೊದಲ ಬಾರಿಗೆ ಚಾಲಕ ರಹಿತ ಮೆಟ್ರೋ ರೈಲುನ್ನು ಪರಿಚಯಿಸಲು ಬಿಎಂಆರ್‌ಸಿಎಲ್ ಸನ್ನದ್ಧವಾಗಿದೆ.
ಮೊದಲ ಚಾಲಕ ರಹಿತ ರೈಲು ಚೀನಾದಿಂದ ಸಮುದ್ರ ಮಾರ್ಗವಾಗಿ ಚೆನ್ನೈ ಬಂದರಿಗೆ ಆಗಮಿಸಿದೆ. ಫೆಬ್ರವರಿ 18ರ ಹೊತ್ತಿಗೆ ಈ ಮೆಟ್ರೋ ರೈಲು ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬರಲಿದೆ. ಬಳಿಕ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಈ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಸಂಚಾರ ನಡೆಸಲಿದೆ.
ರಾಷ್ಟ್ರೀಯ ವಿದ್ಯಾಲಯ ರೋಡ್ (ಆರ್.ವಿ ರಸ್ತೆ) – ಬೊಮ್ಮಸಂದ್ರ ನಮ್ಮ ಮೆಟ್ರೋ ಹಳದಿ ಮಾರ್ಗ ಸದ್ಯವೇ ಕಾರ್ಯಾರಂಭ ಮಾಡಲಿದ್ದು ಅದರಲ್ಲಿ ಈ ಚಾಲಕ ರಹಿತ ರೈಲು ಓಡಾಡಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ.
ಚಾಲಕ ರಹಿತ ಮೆಟ್ರೋ ರೈಲು ಜನವರಿ 24ರಂದು ಶಾಂಘೈ ಬಂದರಿನಿಂದ ಹೊರಟಿದ್ದು, ಫೆಬ್ರವರಿ 6ರಂದು ಚೆನ್ನೈ ಬಂದರು ತಲುಪಿತ್ತು. ಕಸ್ಟಮ್ಸ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ಚೆನ್ನೈ ಬಂದರಿನಲ್ಲೇ ಇರಿಸಲಾಗಿತ್ತು. ಸದ್ಯ ಬಿಎಂಆರ್‌ಸಿಎಲ್ ಅಧಿಕಾರಿಗಳು ಚೆನ್ನೈ ಬಂದರಿಗೆ ತೆರಳಿ ಕಸ್ಟಮ್ಸ್ ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ.
ಸದ್ಯ ಚೀನಾದಿಂದ ಚೆನ್ನೈಗೆ ಬಂದ ರೈಲು ಬೋಗಿಗಳನ್ನು ಚೆನ್ನೈ ಬಂದರಿನ ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರಿಗೆ ತೆರಳಲು ಅನುಮತಿ ನೀಡಿದ್ದಾರೆ. ಹೀಗಾಗಿ ಇದನ್ನು ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಸಾಗಿಸುವ ಪ್ರಕ್ರಿಯೆಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಚಾಲನೆ ನೀಡಿದ್ದು, ಫೆಬ್ರವರಿ 18ರಂದು ಎಲೆಕ್ಟ್ರಾನಿಕ್ಸ್ ಸಿಟಿಯ ಹೆಬ್ಬಗೋಡಿ ಡಿಪೋಗೆ ತಲುಪುವ ನಿರೀಕ್ಷೆ ಇದೆ. ಇನ್ನು ಬೆಂಗಳೂರು ತಲುಪಿದ ಮೇಲೆ ಸುಮಾರು ಮೂರು ತಿಂಗಳು ಈ ಚಾಲಕ ರಹಿತ ರೈಲು ಸಂಚಾರದ ಪ್ರಯೋಗ ನಡೆಯಲಿದ್ದು, ಬಳಿಕ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.


