ಬೆಂಗಳೂರು: ವಿಶ್ವ ವಿಖ್ಯಾತ, ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಬೆಂಗಳೂರಿನ ಜನರು ಅತೀ ಕುತೂಹಲದಿಂದ ಕಾಯುತ್ತಿದ್ದ ಸಂಭ್ರಮಕ್ಕೆ ದಿನ ನಿಗದಿಯಾಗಿದ್ದು, ಶೀಘ್ರದಲ್ಲೇ ಬೆಂಗಳೂರು ಕರಗ ಮಹೋತ್ಸವದ ಸಿದ್ಧತೆ ಕೂಡ ಆರಂಭವಾಗಲಿದೆ. ಬೆಂಗಳೂರು ಕರಗ ಮಹೋತ್ಸವ ಅಂಗವಾಗಿ ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆ ಸಭೆ ನಡೆಸಿದ್ದು, ಏಪ್ರಿಲ್ 15 ರಿಂದ ಏಪ್ರಿಲ್ 23ರವರೆಗೆ ಬೆಂಗಳೂರು ಕರಗ ಉತ್ಸವ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲು ದೇವಾಲಯದ ಆಡಳಿತ ಮಂಡಳಿ ಆಯ್ಕೆ ಮಾಡಿದೆ.
ಏಪ್ರಿಲ್ 15 ರಿಂದ ಬೆಂಗಳೂರು ಕರಗ ಮಹೋತ್ಸವದ ಸಂಭ್ರಮ ನಡೆಯಲಿದ್ದು, ಏಪ್ರಿಲ್ 23ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಹಾಗೂ ಭದ್ರತೆಯಲ್ಲಿ ಕರಗ ಮಹೋತ್ಸವದ ನಡೆಸಲು ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆ ತಿಳಿಸಿದೆ.
ಬೆಂಗಳೂರು ಕರಗ ಮಹೋತ್ಸವವು ಇತಿಹಾಸ ಪ್ರಸಿದ್ಧವಾಗಿದೆ. ಜಾತಿ, ಧರ್ಮದ ಭೇದವಿಲ್ಲದೇ ಲಕ್ಷಾಂತರ ಜನರು ಈ ಕಗರ ಮಹೋತ್ಸವದಲ್ಲಿ ಭಾಗಿಯಾಗುತ್ತದೆ. ಕರಗ ಎಂಬ ಹೆಸರು ಹೂವಿನ ದಿಂಡು ಮತ್ತು ದೇವಿಯ ವಿಗ್ರಹವನ್ನು ಹೊಂದಿರುವ ಕಲಶದ ಅನುರೂಪವಾಗಿದೆ. ಹೂವಿನ ದಿಂಡಿನಿಂದ ಅಲಂಕೃತಗೊಂಡ ಮಣ್ಣಿನ ಮಡಿಕೆ ಅದರಲ್ಲಿರುವ ಕಲಶವನ್ನು ಕೈಯಲ್ಲಿ ಮುಟ್ಟದೆ ಆ ಕಲಶವನ್ನು ಹೊರುವ ವ್ಯಕ್ತಿಯ ತಲೆ ಮೇಲೆ ಇಟ್ಟ ಮೇಲೆ ಕರಗ ಪ್ರದರ್ಶನ ನಡೆಯುತ್ತದೆ.
ಕರಗವನ್ನು ಹೊರುವವರು ಮಹಿಳೆಯಂತೆ ಅಲಂಕಾರ ಮಾಡಿಕೊಂಡಿರಬೇಕು. ಈ ಬಾರಿ ಕರಗ ಹೊರುತ್ತಿರುವ ಎ.ಜ್ಞಾನೇಂದ್ರ ಸ್ವಾಮಿ ಸತತ 14ನೇ ಬಾರಿ ಬೆಂಗಳೂರು ಕರಗ ಹೊರುತ್ತಿದ್ದಾರೆ. ಕಳೆದ ವರ್ಷ ಕರಗ ಶಕ್ತ್ಯೋತ್ಸವ ನಡೆಯುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಎ. ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿ ಕರಗಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. ಈ ಬಾರಿ ಇಂತಹ ಯಾವುದೇ ಘಟನೆ ನಡೆದಂತೆ ಭದ್ರತೆಯಲ್ಲಿ ನಡೆಸಲು ಆಡಳಿತ ಮಂಡಳಿ ಮುಂದಾಗಿದೆ.


