ಬೆಂಗಳೂರು : ರಾಜಧಾನಿಯ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳೆಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಎರಡು ಅಂತಸ್ತಿನ ಕಟ್ಟಡ ಹೊತ್ತಿ ಉರಿದಿದೆ. ಕಟ್ಟಡದಲ್ಲಿ ಸಿಲುಕಿದ್ದ ಓರ್ವ ಯುವಕನನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಕಟ್ಟಡದಲ್ಲಿದ್ದ ಪೇಂಟಿಂಗ್, ಬ್ಯಾಗ್ ಅಂಗಡಿ ಬೆಂಕಿಗಾಹುತಿಯಾಗಿವೆ. ಇನ್ನು 30 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟುಕರಕಲಾಗಿವೆ.
ಬೆಂಕಿ ಮೊದಲು ಪೇಂಟ್ ಮಾರುವ ಅಂಗಡಿಯಲ್ಲಿ ಕಾಣಿಸಿಕೊಂಡಿದೆ. ಕಾಲಕ್ರಮೇಣ ಬೆಂಕಿ ಕಟ್ಟಡವನ್ನೇ ಆವರಿಸಿದೆ. ವಿಚಾರ ತಿಳಿದ ಕೂಡಲೆ ಸ್ಥಳಕ್ಕೆ ದೌಡಾಯಿಸಿದ ಮಾಲೀಕ ಕೃಷ್ಣಮೂರ್ತಿ ಕುಟುಂಬ ಬೆಂಕಿ ಅನಾಹುತ ಕಂಡು ಕಣ್ಣೀರು ಹಾಕಿದೆ. ಅಗ್ನಿಶಾಮಕ ಸಿಬ್ಬಂದಿ ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಘಟನೆಗೆ ನಿಖರ ಕಾರಣ ಏನು ಎಂಬುದರ ಕುರತು ತನಿಖೆ ನಡೆಯುತ್ತಿದೆ.