Thursday, January 29, 2026
26.8 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಬೆಂಗಳೂರು ಟು ಹೈದರಬಾದ್: ಇಲ್ಲಿ ನಾಪತ್ತೆಯಾದ ಬಾಲಕ ಅಲ್ಲಿ ಪತ್ತೆಯಾಗಿದ್ದೇಗೆ?

ಬೆಂಗಳೂರು ಟು ಹೈದರಬಾದ್: ಇಲ್ಲಿ ನಾಪತ್ತೆಯಾದ ಬಾಲಕ ಅಲ್ಲಿ ಪತ್ತೆಯಾಗಿದ್ದೇಗೆ?

ಬೆಂಗಳೂರು : ಟ್ಯೂಷನ್ ಗೆ ಹೋದ ಬಾಲಕನ ಮಿಸ್ಸಿಂಗ್ ಪ್ರಕರಣ ಸುಖಾಂತ್ಯ ಕಂಡಿದೆ. ಮಾರತ್‌ಹಳ್ಳಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಪರಿಣವ್ ಇದೀಗ ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದಾನೆ. ನಾಂಪಲ್ಲಿಯ ಮೆಟ್ರೋ ರೈಲು ನಿಲ್ದಾಣದಲ್ಲಿ ಆತ ಪತ್ತೆಯಾಗಿದ್ದು ಆತನನ್ನು ಕರೆತರಲು ಆತನ ಹೆತ್ತವರು, ಪೊಲೀಸ್ರು ತೆರಳಿದ್ದಾರೆ. ಬೆಂಗಳೂರು ನಗರದ ವೈಟ್ ಫೀಲ್ಡ್ ನಲ್ಲಿರುವ ಅಪಾರ್ಟ್ ವೊಂದರಲ್ಲಿ ವಾಸವಿರುವ ಸುಕೇಶ್ ಮತ್ತು ನಿವೇದಿತಾ ದಂಪತಿಯ ಪುತ್ರ ಪರಿಣವ್ ಭಾನುವಾರ ಮಧ್ಯಾಹ್ನ ಟ್ಯೂಷನ್ ನಿಂದ ಹಿಂದುರುಗುವಾಗ ನಾಪತ್ತೆಯಾಗಿದ್ದ.

ವಿದ್ಯಾರ್ಥಿಯ ನಾಪತ್ತೆಯಾಗಿದ್ದು ತೀವ್ರ ಆತಂಕ ಮತ್ತು ಅಚ್ಚರಿಗೆ ಕಾರಣವಾಗಿತ್ತು. 6 ನೇ ತರಗತಿ ವಿದ್ಯಾರ್ಥಿಯಾಗಿದ್ದ ಆತನನ್ನು ತಂದೆಯೇ ಟ್ಯೂಷನ್ ಸೆಂಟರ್ ಗೆ ಬಿಟ್ಟಿದ್ದರು. ಕರೆತರಲು ಸಹ ತಂದೆಯೇ ಬರಬೇಕಿತ್ತು. ಆದರೆ ತಂದೆ ಅನ್ಯಕಾರ್ಯ ನಿಮಿತ್ತ ಬೇರೆಡೆ ಹೋಗಿದ್ದರಿಂದ ಟ್ಯೂಷನ್ ಸೆಂಟರ್ ಗೆ ಬರುವಾಗ ತಡವಾಗಿತ್ತು. ಆದರೆ ಬಾಲಕ ಅದಾಗಲೇ ಟ್ಯೂಷನ್ ಸೆಂಟರ್ ನಿಂದ ಒಬ್ಬನೇ ತೆರಳಿ ಆಗಿತ್ತು. ರಾತ್ರಿಯಾದರೂ ಹುಡುಗ ಹಿಂದುರುಗಿರಲಿಲ್ಲ. ಹೀಗಾಗಿ ದಂಪತಿ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಹಿಂದುರುಗುವಾಗ ಟ್ಯೂಷನ್ ಸೆಂಟರ್ ನಿಂದ ಮಾರತಹಳ್ಳಿವರೆಗೂ ಬಾಲಕ ನಡೆದುಕೊಂಡೇ ಬಂದಿದ್ದ ಆತ ಬಿಎಂಟಿಸಿ ಬಸ್ ಹತ್ತಿದ್ದಾನೆ. ಇದು ಸಿಸಿಟಿವಿ ಫೂಟೇಜ್ ನಲ್ಲಿ ದಾಖಲಾಗಿತ್ತು. ಆ ಬಳಿಕ ಎಲ್ಲಿಗೆ ಹೋದ ಎಂಬುದು ತಿಳಿದಿರಲಿಲ್ಲ.

ಇದೀಗ ಬೆಂಗಳೂರಿನಿಂದ ನಾಪತ್ತೆಯಾದವ ಹೈದರಾದ್ ನಲ್ಲಿ ಪತ್ತೆಯಾಗಿದ್ದು ಹೇಗೆ ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆತನೇ ಬಸ್ ಹತ್ತಿ ಹೋಗಿದ್ದನೇ ಅಥವಾ ಯಾರಾದರೂ ಅಪಹರಿಸಿದ್ದರೇ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಾಲಕ ತಾಯಿ ನಿವೇದಿತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ನಮ್ಮ ಮಗ ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದಾನೆ. ಸೇಫ್ ಆಗಿ ಇದ್ದಾನೆ ಅಲ್ಲಿಗೆ ನಾವೀಗ ತೆರಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆತನ ನಾಪತ್ತೆಯ ಹಿಂದಿನ ಕಾರಣಗಳು ಈವರೆಗೂ ತಿಳಿದು ಬಂದಿಲ್ಲ. ಬಾಲಕನಿಂದ ಹೈದರಾಬಾದ್ ಪೊಲೀಸರು ಮಾಹಿತಿ ಕಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ.

ಅದೇ ರೀತಿ ಪೋಷಕರು ಮತ್ತು ಪೊಲೀಸರು ಹೈದರಾಬಾದ್ ಗೆ ತೆರಳಿ ಬಾಲಕನ ಜೊತೆ ಮಾತನಾಡಿದ ಬಳಿಕ ಘಟನೆಗೆ ಕಾರಣ ತಿಳಿಯಬೇಕಿದೆ. ಈ ವಿದ್ಯಾರ್ಥಿಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ವಿದ್ಯಾರ್ಥಿ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಕೋರಿದ್ದರು. ವೈಟ್‌ಫೀಲ್ಡ್‌ನ ಖಾಸಗಿ ಶಾಲೆ ವಿದ್ಯಾರ್ಥಿ ಭಾನುವಾರ ಸಾಯಂಕಾಲ ಟ್ಯೂಷನ್‌ಗೆ ತೆರಳಿ ವಾಪಸ್‌ ಮನೆಗೆ ಬಂದಿರಲಿಲ್ಲ. ಈ ನಿಟ್ಟಿನಲ್ಲಿ ಪೋಷಕರು ನೀಡಿರುವ ದೂರು ಆಧರಿಸಿ ಹುಡುಕಾಟ ನಡೆದಿತ್ತು. ಮಾರತ್‌ಹಳ್ಳಿ ಸೇತುವೆ ಬಳಿ ವಿದ್ಯಾರ್ಥಿ ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಲಾಗಿತ್ತು. ನಾಲ್ಕು ಪ್ರತ್ಯೇಕ ತಂಡಗಳು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ, ಹೊರ ಜಿಲ್ಲೆಗಳಲ್ಲೂ ಹುಡುಕಾಟ ನಡೆಸಿತ್ತು. ಇದೀಗ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments