ಬೆಂಗಳೂರು: ನಮ್ಮ ಮೆಟ್ರೋ ಜ್ಞಾನ ಭಾರತಿ ನಿಲ್ದಾಣದಲ್ಲಿ ಯುವಕನೊಬ್ಬ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಿಹಾರ ಮೂಲದ 30 ವರ್ಷದ ಸಿದ್ದಾರ್ಥ್ ಎಂಬಾತ ಮೆಟ್ರೋ ಹಳಿಗೆ ಹಾರಿದ್ದು ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿಗಳು ಆತನ ರಕ್ಷಣೆ ಮಾಡಿದ್ದಾರೆ. ಇದರಿಂದಾಗಿ ರೈಲು ಸಂಚಾರದಲ್ಲಿ ಕೆಲಕಾಲ ವ್ಯತ್ಯವಾಗಿತ್ತು.
ಜ್ಞಾನ ಭಾರತಿ ನಿಲ್ದಾಣದಲ್ಲಿ ನಿಂತಿದ್ದ ಯುವಕ ರೈಲು ಬರುತ್ತಿದ್ದಂತೆ ಹಳಿಗೆ ಜಿಗಿದಿದ್ದಾನೆ. ಈ ವೇಳೆ ಎಚ್ಚೆತ್ತ ಸಿಬ್ಬಂದಿ ತುರ್ತು ನಿರ್ವಹಣಾ ಬಟನ್ ಒತ್ತಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದರು. ಇನ್ನು ರೈಲಿನ ಕೆಳಗೆ ಸಿಲುಕಿದ ಯುವಕ ಹೊರ ಬರಲಾರದೇ ಪರದಾಟ ನಡೆಸಿದ್ದನು. ಈ ವೇಳೆ ಸಿಬ್ಬಂದಿಗಳು ಆತನನ್ನ ಹಳಿಯಿಂದ ಹೊರಕ್ಕೆ ತಂದಿದ್ದಾರೆ.
ಮಂಗಳವಾರ ಮಧ್ಯಾಹ್ನ 2-13ರ ಸುಮಾರಿಗೆ ಘಟನೆ ನಡೆದಿದ್ದು, ಇದರಿಂದಾಗಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 750 ಹೈವೋಲ್ವೇಜ್ ವಿದ್ಯುತ್ ಇದೆ ಅಂತ ಗೊತ್ತಿದ್ದರು ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.