ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಯುವಕನೋರ್ವ ಆತಂಕ ಸೃಷ್ಟಿಸಿದ್ದಾನೆ. ಸಿಎಂ ಸಿದ್ದರಾಮಯ್ಯ ಅವರು ಕುಳಿತುಕೊಂಡಿದ್ದ ವೇದಿಕೆಯ ಮೇಲೆ ಏಕಾಏಕಿ ಜಿಗಿದ ಯುವಕ ಗಾಬರಿ ಮೂಡಿಸಿದ್ದಾನೆ. ವಿಧಾನಸೌಧದ ಮುಂದೆ ನಡೆಯುತ್ತಿರುವ ಕಾರ್ಯಕ್ರಮದ ವೇದಿಕೆ ಮೇಲೆ ಶಾಲು ಹಿಡಿದು ಸಿಎಂ ಸಿದ್ದರಾಮಯ್ಯ ಬಳಿ ನುಗ್ಗಲು ಯುವಕ ಯತ್ನಿಸಿದ್ದು ವೇದಿಕೆ ಮೇಲ್ಭಾಗಕ್ಕೆ ಜಂಪ್ ಮಾಡಿದ್ದಾನೆ. ಈ ವೇಳೆ ವೇದಿಕೆ ಮೇಲಿದ್ದ ಹಲವು ಗಣ್ಯರು ತಬ್ಬಿಬ್ಬಾಗಿದ್ದಾರೆ. ಸಿಎಂ ಅಂಗರಕ್ಷಕರು ಕೂಡಲೇ ಯುವಕನನ್ನ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದರೂ ಯುವಕ ಸಿಎಂ ಕಡೆ ಶಾಲು ಎಸೆದಿದ್ದಾನೆ. ಯುವಕ ನುಗ್ಗಿದ ವೇಗಕ್ಕೆ ಗಣ್ಯರು ಗಲಿಬಿಲಿಗೊಂಡರು.
ಹೌದು. ಸಂವಿಧಾನದ ಆಶಯ ಜಾಗೃತಿಗೊಳಿಸುವ ಸದುದ್ದೇಶದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ನಿಮಿತ್ತ ಬೆಂಗಳೂರು ವಿಧಾನಸೌಧದ ಮುಂಭಾಗ ಹಮ್ಮಿಕೊಳ್ಳಲಾದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಬೀದರ್‌ನಿಂದ ಚಾಮರಾಜನಗರದವರೆಗೆ ಏಕಕಾಲಕ್ಕೆ ಹಮ್ಮಿಕೊಂಡ ಬೃಹತ್ ಮಾನವ ಸರಪಳಿಗೆ ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ನಗಾರಿ ಬಾರಿಸುವ ಮೂಲಕ ಸಿಎಂ ಚಾಲನೆ ನೀಡಿದರು. ಈ ಮೂಲಕ 2,500 ಕಿಮೀ ಉದ್ದದ ಮಾನವ ಸರಪಳಿ ನಿರ್ಮಿಸಿ ವಿಶ್ವದಾಖಲೆಗೆ ಸರ್ಕಾರ ಮುಂದಾಗಿದೆ.
ಕಾರ್ಯಕ್ರಮದ ವೇಳೆ ಕೇಸರಿ ಶಾಲು ಹಿಡಿದ ಯುವಕನೊಬ್ಬ ಏಕಾಏಕಿ ಸಿಎಂ ಕುಳಿತಿದ್ದ ವೇದಿಕೆಗೆ ನುಗ್ಗಿದ್ದಾನೆ. ಮೆಟ್ಟಿಲುಗಳ ಮಾರ್ಗವಾಗಿ ಸಿಎಂ ಕಡೆಗೆ ನುಗ್ಗಿದ್ದಾನೆ. ಈ ವೇಳೆ ವೇದಿಕೆಯಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನ ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಯುವಕನನ್ನ ಮಹದೇವ್ ನಾಯಕ್ ಎಂದು ಗುರುತಿಸಲಾಗಿದೆ.
ಬಂಧಿತ ಯುವಕ ಕಳೆದ ಒಂದು ವಾರದಿಂದ ಸಿಎಂ ಭೇಟಿಗೆ ಯತ್ನಿಸಿದ್ದ. ಭಾನುವಾರವೂ ಸಹ ಕಾರ್ಯಕ್ರಮದಲ್ಲಿ ಜನಜಂಗುಳಿ ಮಧ್ಯೆ ತೂರಿಕೊಂಡು ಹೋಗಿದ್ದ ಎಂದು ತಿಳಿದುಬಂದಿದೆ. ಮತ್ತೊಂದು ಕಡೆ ಈತ ಸಿಎಂ ಮೇಲಿನ ಪ್ರೀತಿಯಿಂದ ಅವರಿಗೆ ಶಾಲು ಹೊದಿಸಲು ಬಂದಿದ್ದ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಬಂಧಿತ ಯುವಕ ಬೆಂಗಳೂರು ಬನಶಂಕರಿಯಲ್ಲಿ ವಾಸವಾಗಿದ್ದು, ಮೂಲತಃ ಉತ್ತರ ಕರ್ನಾಟಕದವನು ಎನ್ನಲಾಗಿದೆ. ಸದ್ಯ ವಿಧಾನಸೌಧ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಧಾನಸೌಧದ ಮುಂಭಾಗ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಸಿ ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ.ಜೆ ಜಾರ್ಜ್, ದಿನೇಶ್ ಗುಂಡೂರಾವ್, ಪರಿಷತ್ ಸಭಾಪತಿ ಹೊರಟ್ಟಿ, ಶಾಸಕ ರಿಜ್ವಾನ್ ಅರ್ಷದ್, ಪರಿಷತ್ ಸದಸ್ಯ ಸಲೀಂ ಅಹಮದ್, ಯು.ಬಿ ವೆಂಕಟೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಪ್ಪ ಮತ್ತಿತರರು ಪಾಲ್ಗೊಂಡಿದ್ದರು.