ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರಿನ ರಸ್ತೆಗಳು ಹಾಗೂ ಗುಂಡಿಗಳದ್ದೇ ಸದ್ದು. ಮಳೆಯಿಂದಾಗಿ ಬೆಂಗಳೂರಿನ ಹಲವಾರು ಭಾಗದ ರಸ್ತೆಗಳು ಹಾಳಾಗಿ ಹೋಗಿವೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು ಗುಂಡಿ ಮುಚ್ಚುವ ಕಾರ್ಯವನ್ನು ಆರಂಭಿಸಿದ್ದರೂ ಇನ್ನೂ ಗುಂಡಿಯಿಂದ ರಸ್ತೆಗಳು ಮುಕ್ತಿ ಪಡೆದಿಲ್ಲ. ಜನ ಸರ್ಕಾರವನ್ನು ದೂಷಿಸುವುದನ್ನು ನಿಲ್ಲಿಸಿಲ್ಲ. ಈಗಾಗಲೇ ಸರ್ಕಾರವೂ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಿಸಲು ಅನುದಾನವನ್ನೂ ಬಿಡುಗಡೆ ಮಾಡಿದೆ. ಆದರ ದೂರುಗಳು ಬರುತ್ತಲೇ ಇವೆ. ಈ ನಡುವೆ ರಸ್ತೆ ಗುಂಡಿಗಳನ್ನು ಮುಚ್ಚದೇ ಇದ್ದರೆ, ನಿಗದಿ ಅವಧಿಯೊಳಗೆ ಕೆಲಸ ಆಗದೇ ಇದ್ದರೆ ಅಧಿಕಾರಿಗಳ ತಲೆದಂಡ ಖಚಿತ ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಸಂಜೆ ಅಮೆರಿಕಾ ಪ್ರವಾಸ ಹೊರಡುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈಗಾಗಲೇ ವಲಯವಾರು ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ನಿಗದಿತ ಅವಧಿಯೊಳಗೆ ರಸ್ತೆ ಗುಂಡಿ ಮುಚ್ಚಿಸಬೇಕು. ಇಲ್ಲದೇ ಇದ್ದರೆ ಕ್ರಮ ಖಂಡಿತಾ ಆಗಲಿದೆ ಎಂದು ಎಚ್ಚರಿಕೆಯ ದನಿಯಲ್ಲೇ ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಸೆಪ್ಟೆಂಬರ್ 1 ರಂದು ನಗರದಾದ್ಯಂತ ಗುಂಡಿಗಳನ್ನು ಮುಚ್ಚಲು 15 ದಿನಗಳ ಗಡುವು ನೀಡಿದ್ದರು. ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ವಾರದೊಳಗೆ ಮುಚ್ಚದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಈಗ ಮತ್ತೆ ಅದನ್ನೇ ಪುನರುಚ್ಚರಿಸಿದ್ದಾರೆ.
ಅಧಿಕಾರಿಗಳ ಸಭೆಯಲ್ಲಿ ವಾರ್ನಿಂಗ್
ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಮತ್ತು ಮುಖ್ಯ ಎಂಜಿನಿಯರ್ ಗಳೊಂದಿಗೆ ಸಭೆ ನಡೆಸಿದ್ದು, ನಾನು ನೀಡಿದ್ದ ಹದಿನೈದು ದಿನಗಳ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಅಲ್ಲಿರುವ 400 ಸಿಬ್ಬಂದಿ-ಎಂಜಿನಿಯರ್ ಗಳು ಮೊದಲು ಗುಂಡಿಗಳನ್ನು ಮುಚ್ಚುವತ್ತ ಗಮನ ಹರಿಸಬೇಕು. ಹಾಗೆ ಮಾಡಲು ವಿಫಲವಾದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.