ಮೈಸೂರು ; ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪಿಸಲಾಗಿದೆ. ಈ ಬಾಲರಾಮನ ಮೂರ್ತಿ ಮೂಡಿ ಬಂದಿರುವ ಕೃಷ್ಣ ಶಿಲೆಗೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 80 ಸಾವಿರ ರೂ. ದಂಡ ವಿಧಸಿದ್ದರು. ಈ ದಂಡವನ್ನು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಪಾವತಿಸಿದ್ದರು. ಈಗ ಶ್ರೀನಿವಾಸ್ ನಟರಾಜ್ ಪಾವತಿಸಿದ ದಂಡದ ಮೊತ್ತವನ್ನು 80,000 ರೂ. ಅನ್ನು ಬಿಜೆಪಿ ನೀಡಲಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗುಜ್ಜೇಗೌಡನಪುರ ಗ್ರಾಮದಲ್ಲಿನ ಜಮೀನಿನ ಮಾಲೀಕರಾದ ರಾಮದಾಸ್ ಅವರು ನೆಲ ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಅವರಿಗೆ ಗುತ್ತಿಗೆ ನೀಡಿದ್ದರು. ನೆಲ ಸಮತಟ್ಟು ಮಾಡುವ ವೇಳೆ ಜಮೀನಿನಲ್ಲಿ ಶಿಲ್ಪಕ್ಕೆ ಯೋಗ್ಯವಾದ ಕೃಷ್ಣಶಿಲೆ ದೊರೆಯುತ್ತಿದ್ದವು. ಈ ವಿಷಯ ತಿಳಿದ ಹಲವು ಶಿಲ್ಪಿಗಳು ಇಲ್ಲಿಗೆ ಬಂದು ಕೃಷ್ಣ ಶಿಲೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈಗ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ ಅರಳಿರುವ ಕೃಷ್ಣ ಶಿಲೆಯೂ ದೊರೆತಿತ್ತು.
ಜಮೀನಿನ 10 ಅಡಿ ಆಳದಲ್ಲಿ 2022ರಲ್ಲಿ ದೊರೆತ ಭಾರಿ ಗಾತ್ರವಿದ್ದ ಶಿಲೆಯನ್ನು ಮೂರು ಭಾಗವಾಗಿ ಮಾಡಿ ಮೇಲೆತ್ತಲಾಗಿತ್ತು. ಆಗ ಅಯೋಧ್ಯೆಗೆ ಈ ಶಿಲೆ ಹೋಗುತ್ತದೆ ಎನ್ನುವ ಕಲ್ಪನೆ ಯಾರಿಗೂ ಇರಲಿಲ್ಲ. ನೆಲದಿಂದ ಹೊರ ತೆಗೆದು ಜಮೀನಿನಲ್ಲಿ ಇಟ್ಟಿದ್ದ ಕಲ್ಲುಗಳನ್ನು ಕಂಡ ಕೆಲವರು, ಜಮೀನಿನಲ್ಲಿ ಅನಧಿಕೃತ ಗಣಿಗಾರಿಕೆ ನಡೆಯುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು, ಭಾರಿ ಗಾತ್ರದ ಕಲ್ಲುಗಳನ್ನು ಹೊರ ತೆಗೆಯಬೇಕಾದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಈಗ ಕಲ್ಲು ತೆಗೆದಿರುವುದು ಅನಧಿಕೃತ ಎಂದು ಹೇಳಿ ಕಲ್ಲುಗಳ ಗಾತ್ರದ ಆಧಾರದ ಮೇಲೆ ಒಟ್ಟು 80 ಸಾವಿರ ರೂ. ದಂಡ ವಿಧಿಸಿದ್ದರು.
ಕಲ್ಲು ತೆಗೆಯಲು ಅನುಮತಿ ಪಡೆಯಬೇಕು ಎನ್ನುವ ಅರಿವಿಲ್ಲದೆ ಗುತ್ತಿಗೆದಾರ ಶ್ರೀನಿವಾಸ್ ನಟರಾಜನ್ ಅನ್ಯ ಮಾರ್ಗವಿಲ್ಲದೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಿಧಿಸಿದ ದಂಡವನ್ನು ಆನ್‌ಲೈನ್ ಮೂಲಕವೇ ಪಾವತಿಸಿದ್ದರು. ಈಗ ಹಣವನ್ನು ಬಿಜೆಪಿ ಶ್ರೀನಿವಾಸ್ ನಟರಾಜ್ ಅವರಿಗೆ ನೀಡಲಿದೆ ಎಂದು ಪ್ರತಾಪ್ ಸಿಂಹ ಹೇಳಿದರು.