Top Newsಕ್ರಿಕೆಟ್ಸುದ್ದಿ

IND vs AUS: ಸಿರಾಜ್ ಭರ್ಜರಿ ಬೌಲಿಂಗ್:ಆಸ್ಟ್ರೇಲಿಯಾ ತಂಡಕ್ಕೆ ಆಘಾತ

ಪರ್ತ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಪ್ರದರ್ಶನ ಮುಂದುವರೆಸಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ನೀಡಿದ 534 ರನ್​ಗಳ ಕಠಿಣ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 12 ರನ್​ಗಳಿಸಿದ್ದ ಆಸ್ಟ್ರೇಲಿಯಾ ತಂಡವು ನಾಲ್ಕನೇ ದಿನದಾಟದ ಆರಂಭದಲ್ಲೇ ಉಸ್ಮಾನ್ ಖ್ವಾಜಾ (4) ವಿಕೆಟ್ ಕಳೆದುಕೊಂಡಿತು. ಸಿರಾಜ್ ಎಸೆತದ ಅತ್ಯುತ್ತಮ ಎಸೆತವನ್ನು ಗುರುತಿಸುವಲ್ಲಿ ಎಡವಿದ ಖ್ವಾಜಾ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು.

ಈ ವೇಳೆ ಕಣಕ್ಕಿಳಿದ ಸ್ಟೀವ್ ಸ್ಮಿತ್ ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ ಕ್ರೀಸ್ ಕಚ್ಚಿ ನಿಂತಿದ್ದರು. 25ನೇ ಓವರ್​ ವೇಳೆ ಟೀಮ್ ಇಂಡಿಯಾ ನಾಯಕ ಜಸ್​ಪ್ರೀತ್ ಬುಮ್ರಾ ಚೆಂಡನ್ನು ಸಿರಾಜ್​ಗೆ ಕೈಗಿತ್ತರು.ಮತ್ತೊಮ್ಮೆ ಮಾರಕ ದಾಳಿ ಸಂಘಟಿಸಿದ ಸಿರಾಜ್ ಅನುಭವಿ ಸ್ಟೀವ್ ಸ್ಮಿತ್ (17) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದಾಗ್ಯೂ ಮತ್ತೊಂದೆಡೆ ಟ್ರಾವಿಸ್ ಹೆಡ್ 72 ಎಸೆತಗಳಲ್ಲಿ 63 ರನ್ ಬಾರಿಸಿ ಕ್ರೀಸ್​ನಲ್ಲಿದ್ದಾರೆ.ಭೋಜನಾ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡವು 5 ವಿಕೆಟ್ ಕಳೆದುಕೊಂಡು 104 ರನ್​ ಗಳಿಸಿದೆ. ಸದ್ಯ ಕ್ರೀಸ್​ನಲ್ಲಿ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಅತ್ತ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 430 ರನ್​ಗಳ ಅವಶ್ಯಕತೆಯಿದ್ದರೆ, ಇತ್ತ ಟೀಮ್ ಇಂಡಿಯಾಗೆ ಕೇವಲ 5 ವಿಕೆಟ್​ಗಳ ಅಗತ್ಯತೆಯಿದೆ. ಹೀಗಾಗಿ ಪರ್ತ್​ ಟೆಸ್ಟ್ ಪಂದ್ಯವು ಸದ್ಯ ಟೀಮ್ ಇಂಡಿಯಾದ ಹಿಡಿತದಲ್ಲಿದ್ದು, ಹೀಗಾಗಿ ಈ ಮ್ಯಾಚ್​ನಲ್ಲಿ ಭಾರತ ತಂಡದ ಗೆಲುವನ್ನು ನಿರೀಕ್ಷಿಸಬಹುದು.

 

Comments (0)

Your email address will not be published. Required fields are marked *

Back to top button