ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಚವಾಣ್ ಸೋಮವಾರ ತಮ್ಮ ಶಾಸಕತ್ವ ಹಾಗೂ ಕಾಂಗ್ರೆಸ್‌ಗೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್‌ನಿಂದ ಹೊರಬರುವುದು ಅವರ ವೈಯಕ್ತಿಕ ವಿಚಾರ ಎಂದಿದ್ದ ಅವರು, ಇನ್ನೆರಡು ದಿನಗಳಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಒಂದೇ ದಿನಕ್ಕೆ ಬಿಜೆಪಿಗೆ ಸೇರಿದ್ದಾರೆ. ಆದರೆ ಯಾವ ಕಾರಣಕ್ಕೆ ಪಕ್ಷ ಬಿಟ್ಟಿದ್ದಾಗಿ ಸ್ಪಷ್ಟನೆ ನೀಡಿರಲಿಲ್ಲ.
ಚವಾಣ್ ಅವರು ಡಿಸೆಂಬರ್ 2008 ರಿಂದ ನವೆಂಬರ್ 2010 ರವರೆಗೆ ಎರಡು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಡಿಸೆಂಬರ್ 2008ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ, ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ವಿಲಾಸ್ ರಾವ್ ದೇಶಮುಖ್ ಅವರನ್ನು ಸಿಎಂ ಹುದ್ದೆಯಿಂದ ತೆಗೆದುಹಾಕಿದ ನಂತರ ಚವಾಣ್ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಆ ನಂತರ 2009ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಅವರನ್ನು ಮತ್ತೆ ಸಿಎಂ ಮಾಡಲಾಗಿತ್ತು. ಆದರೆ 2010 ರಲ್ಲಿ ಕಾರ್ಗಿಲ್ ಹುತಾತ್ಮರ ವಂಶಸ್ಥರಿಗಾಗಿ ಮುಂಬೈನಲ್ಲಿ ನಿರ್ಮಿಸಲಾದ ಆದರ್ಶ ಹೌಸಿಂಗ್ ಸೊಸೈಟಿ, ಸಂಬಂಧಿಕರಿಗೆ ಮನೆಗಳನ್ನು ನೀಡುವ ವಿಚಾರದಲ್ಲಿ ಗೊಂದಲ ಉಂಟಾಗಿ ಅಶೋಕ್ ಚವಾಣ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅಶೋಕ್ ಚವಾಣ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಂಕರ್ ರಾವ್ ಚವಾಣ್ ಅವರ ಪುತ್ರ. ಮಹಾರಾಷ್ಟ್ರದ ಇತಿಹಾಸದಲ್ಲಿಯೇ ಅಪ್ಪ ಮಗ ಸಿಎಂ ಮೊದಲ ಉದಾಹರಣೆಯಾಗಿತ್ತು. ನಾಂದೇಡ್ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಮಹಾರಾಷ್ಟ್ರದಲ್ಲಿ ಸಂಸ್ಕೃತಿ ಇಲಾಖೆ, ಕೈಗಾರಿಕೆ ಮತ್ತು ಗಣಿ ಇಲಾಖೆಯ ಜವಾಬ್ದಾರಿಗಳನ್ನು ಸಹ ನಿರ್ವಹಿಸಿದ್ದಾರೆ.


