Top Newsರಾಜ್ಯಸುದ್ದಿ

ಹೊಸ ವರ್ಷಕ್ಕೆ ಚಾಲಕರಹಿತ ರೈಲುಗಳ ಆಗಮನ: ಈ ಮಾರ್ಗದಲ್ಲಿ ಜನ ದಟ್ಟಣೆ ಕಡಿಮೆಯಾಗುವ ಸಾಧ್ಯತೆ!

ಬೆಂಗಳೂರು: ನಮ್ಮ ಮೆಟ್ರೋದ ನೇರಳೆ ಮಾರ್ಗಕ್ಕೆ ಅಗತ್ಯವಿರುವ ಚಾಲಕ ರಹಿತ ರೈಲು ಬೋಗಿಗಳು ಚೀನಾದಿಂದ ಆಗಮಿಸುತ್ತಿದ್ದು, ಜ.10 ರೊಳಗೆ ಪೀಣ್ಯ ಡಿಪೊ ತಲುಪಲಿವೆ. ಕೆಲ ದಿನಗಳ ಕಾಲ ನಾನಾ ತಪಾಸಣೆಗೊಳಪಟ್ಟ ಬಳಿಕ ಮೆಟ್ರೊ ಹಳಿಗಳಿಗೆ ಇಳಿಯಲಿವೆ.

ಪೀಣ್ಯ ಡಿಪೊ ತಲುಪುವ ಬೋಗಿಗಳನ್ನು ಜೋಡಿಸಿ ರೈಲು ಸಿದ್ಧಪಡಿಸಲಾಗುತ್ತದೆ. ಇದು ಡಿಟಿಜಿ ತಂತ್ರಜ್ಞಾನ ಹೊಂದಿರುವ ರೈಲು ಆಗಿದ್ದರೂ, ಹೊಸ ಕಂಪನಿಯಿಂದ ಬರುತ್ತಿರುವ ಕಾರಣ ಮುಖ್ಯ ಟ್ರ್ಯಾಕ್‌ಗೆ ತರುವ ಮುನ್ನ ನಾನಾ ತಪಾಸಣೆಗೆ ಒಳಪಡಿಸಲಾಗುತ್ತದೆ. ರಾತ್ರಿ ವೇಳೆ ಪರಿಶೀಲನೆ ನಡೆಸಿ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ.

ಆನಂತರ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯ (ಆರ್‌ಡಿಎಸ್‌ಒ) ಅಧಿಕಾರಿಗಳು ಪರಿಶೀಲಿಸಿ ಒಪ್ಪಿಗೆ ಸೂಚಿಸಿದ ಬಳಿಕ ವಾಣಿಜ್ಯ ಸಂಚಾರ ಆರಂಭಿಸಲಾಗುತ್ತದೆ. ಬಿಎಂಆರ್‌ಸಿಎಲ್‌ 2019 ರಲ್ಲೇ ಚೀನಾದ ಸಿಆರ್‌ಆರ್‌ಸಿ ಕಂಪನಿ ಜತೆಗೆ ನೇರಳೆ, ಹಸಿರು ಮಾರ್ಗಕ್ಕೆ 21 ರೈಲು ಮತ್ತು ಹಳದಿ ಮಾರ್ಗಕ್ಕಾಗಿ 15 ಸೇರಿ ಒಟ್ಟು 36 ಬೋಗಿಗಳನ್ನು ಪೂರೈಸುವಂತೆ ಒಪ್ಪಂದ ಮಾಡಿಕೊಂಡಿತ್ತು. ಸಿಆರ್‌ಆರ್‌ಸಿ ಭಾರತದ ಟಿಆರ್‌ಎಎಲ್‌ (ಕಲ್ಕತ್ತಾದ ರೈಲು ತಯಾರಿಕಾ ಕಂಪನಿ) ಜತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡು ರೈಲುಗಳನ್ನು ಪೂರೈಸುತ್ತಿದೆ.

ಬಹುನಿರೀಕ್ಷಿತ ಆರ್‌.ವಿ.ರಸ್ತೆ- ಬೊಮ್ಮಸಂದ್ರ ನಡುವಿನ (ಹಳದಿ) 18.82 ಕಿ.ಮೀ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಮುಹೂರ್ತ ಕೂಡಿ ಬಂದಿದ್ದು, 2025ರ ಜನವರಿಯಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ.

ಹಳದಿ ಮಾರ್ಗದಲ್ಲಿ16 ನಿಲ್ದಾಣ

ಈ ಮಾರ್ಗದಲ್ಲಿಚಾಲಕ ರಹಿತ ರೈಲುಗಳು ಓಡಲಿವೆ. ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ 18.82 ಕಿ.ಮೀ ಮಾರ್ಗದಲ್ಲಿ16 ನಿಲ್ದಾಣಗಳಿವೆ. ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್‌ ರಸ್ತೆ, ಇನ್ಫೋಸಿಸ್‌ ಫೌಂಡೇಷನ್‌-ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್‌ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲುಗೇಟ್‌, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್‌ ಸಿಲ್ಕ್ ಬೋರ್ಡ್‌, ಬಿಟಿಎಂ ಲೇಔಟ್‌, ಜಯದೇವ ಆಸ್ಪತ್ರೆ, ರಾಗಿಗುಡ್ಡ ಮತ್ತು ಆರ್‌.ವಿ.ರಸ್ತೆ ನಿಲ್ದಾಣಗಳನ್ನು ಈ ಮಾರ್ಗವು ಒಳಗೊಂಡಿದೆ.

 

Comments (0)

Your email address will not be published. Required fields are marked *

Back to top button