#Exclusive NewsTop Newsಜಿಲ್ಲೆಫ್ರೀಡಂ ಟಿವಿ ವಿಶೇಷವಾಣಿಜ್ಯವಿಶೇಷವೈರಲ್ ನ್ಯೂಸ್

ಲಂಚದಾರೋಪದ ಮೇಲೆ ಎಆರ್‌ಒ ಮತ್ತು ಟಿಎ ಬಂಧನ!

ಬೆಂಗಳೂರು: ಆಸ್ತಿ ತೆರಿಗೆ ಕಡಿಮೆ ಮಾಡಿಕೊಡುತ್ತೇವೆಂದು ಹೇಳಿ ₹4.50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬಿಬಿಎಂಪಿಯ ಯಶವಂತಪುರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ರಾಜೇಂದ್ರ ಪ್ರಸಾದ್ ಮತ್ತು ತೆರಿಗೆ ಮೌಲ್ಯಮಾಪಕ ಪ್ರಕಾಶ್ (ಟಿಎ) ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ಬಿ.ಕೆ.ನಗರ ನಿವಾಸಿ ಚಂದ್ರಶೇಖರ್ ಸಿ. ಎಂಬವರಿಗೆ ಕರೆ ಮಾಡಿದ್ದ ಆರೋಪಿಗಳು, ‘ನಿಮ್ಮ ವಾಣಿಜ್ಯ ಸಂಕೀರ್ಣದ ತೆರಿಗೆ ಕಡಿಮೆ ಮಾಡಿಕೊಡುತ್ತೇವೆ. ಇದಕ್ಕಾಗಿ ₹4.50 ಲಕ್ಷ ನೀಡಿ’ ಎಂದು ಬೇಡಿಕೆ ಇಟ್ಟಿದ್ದರು. ಚಂದ್ರಶೇಖ‌ರ್ ಅವರು ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ‘ಆರೋಪಿಗಳಿಗೆ ಲಂಚದ ಹಣ ನೀಡಿ ಎಂದು ಚಂದ್ರಶೇಖರ್ ಅವರಿಗೆ ಸೂಚಿಸಲಾಗಿತ್ತು. ಗುರುವಾರ ಬೆಳಿಗ್ಗೆ ಬಿಬಿಎಂಪಿ ಕಚೇರಿಗೆ ತೆರಳಿದ್ದ ಚಂದ್ರಶೇಖರ್, ಪ್ರಕಾಶ್ ಅವರಿಗೆ ಲಂಚ ನೀಡಿದ್ದರು. ಕಚೇರಿಯ ಒಳಗೇ ಲಂಚ ಪಡೆದುಕೊಂಡಿದ್ದ ಪ್ರಕಾಶ್, ರಾಜೇಂದ್ರ ಅವರಿಗೂ ಹಣ ನೀಡಿದ್ದರು’ ಎಂದು ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಅಂಜನ್ ಕುಮಾರ್ ಮಾಹಿತಿ ನೀಡಿದರು. ‘ಇದೇ ವೇಳೆ ದಾಳಿ ನಡೆಸಿ, ಇಬ್ಬರನ್ನೂ ಬಂಧಿಸಲಾಯಿತು. ಅವರ ಬಳಿ ಇದ್ದ ₹4.50 ಲಕ್ಷ ಲಂಚದ ಹಣವನ್ನು ವಶಕ್ಕೆ ಪಡೆಯಲಾಯಿತು. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಅವರು ತಿಳಿಸಿದರು.

 

Comments (0)

Your email address will not be published. Required fields are marked *

Back to top button