ಬೆಳಗಾವಿ : ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ 7 ತಾಲೂಕುಗಳನ್ನು ಒಳಗೊಂಡ ಪ್ರತ್ಯೇಕ ಕದಂಬ ಕನ್ನಡ ಜಿಲ್ಲೆ ರಚನೆ ಕುರಿತ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಗಮನಕ್ಕೆ ತರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ.
ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಸುವರ್ಣ ಸೌಧದ ಬಳಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿ, ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದರು. 10ವರ್ಷಗಳಿಂದ ಪ್ರತ್ಯೇಕ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟ ಸರಕಾರದ ಗಮನಕ್ಕೆ ಬಂದಿದೆ. ಬೇಡಿಕೆಯನ್ನು ಸಿಎಂ, ಕಂದಾಯ ಸಚಿವರ ಗಮನಕ್ಕೆ ತರುವೆ ಎಂದರು. ಯಲ್ಲಾಪುರ-ಮುಂಡಗೋಡು ಶಾಸಕ ಶಿವರಾಮ ಹೆಬ್ಬಾರ್‌ಆಗಮಿಸಿ, ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ವಿಶಾಲವಾಗಿದ್ದು, ವಿಸ್ತೀರ್ಣದಲ್ಲಿ ಬೆಳಗಾವಿಗಿಂತ ದೊಡ್ಡದಾಗಿದೆ. ಎಲ್ಲಾ ತಾಲೂಕಿನಿಂದ ಪ್ರಬಲ ಜನಾಗ್ರಹ ರೂಪುಗೊಳ್ಳಬೇಕು. ಜಿಲ್ಲೆಯ ಸಾಹಿತಿಗಳು, ಪತ್ರಕರ್ತರು, ಬುದ್ದಿಜೀವಿಗಳು ಸೇರಿ ಹೆಚ್ಚು ಚರ್ಚೆ ನಡೆಸಬೇಕು. ನಾನೂ ಸಹ ಸರಕಾರದ ಮಟ್ಟದಲ್ಲಿ ಈ ಬಗ್ಗೆ ಗಮನ ಸೆಳೆಯುತ್ತೇನೆ ಎಂದು ಹೇಳಿದರು. ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಹೋರಾಟಗಾರರ ಮನವಿ ಸ್ವೀಕರಿಸಿದರು. ಭೀಮಣ್ಣ ನಾಯ್ಕ ಮಾತನಾಡಿ, ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ಎಲ್ಲ ಶಾಸಕರು ಒಗ್ಗಟ್ಟಾಗಿ ಈ ನಿಟ್ಟಿನಲ್ಲಿ ಪ್ರಯತ್ನ ಪಡಬೇಕಿದೆ. ಮುಖ್ಯಮಂತ್ರಿ, ಕಂದಾಯ ಸಚಿವರ ಗಮನಕ್ಕೆ ಈ ವಿಷಯ ತರುವ ಕೆಲಸ ಮಾಡುತ್ತೇನೆ. ಕದಂಬ ಕನ್ನಡ ಜಿಲ್ಲೆ, ಬನವಾಸಿ ಮತ್ತು ಗೋಕರ್ಣ ನೂತನ ತಾಲೂಕು ಘೋಷಣೆಗೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಭರವಸೆ ನೀಡಿದರು.