ದಕ್ಷಿಣ ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಮತ್ತೊಮ್ಮೆ ಅನ್ಯಾಯವಾಗಿದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ದಕ್ಷಿಣದ ರಾಜ್ಯಗಳ ಶೃಂಗ ನಡೆಸುವುದಕ್ಕೆ ರಾಜ್ಯ ಸರ್ಕಾರ ಸದ್ದಿಲ್ಲದೆ ತಯಾರಿ ನಡೆಸಿದೆ.
ಈ ಬಾರಿಯ ಹಂಚಿಕೆ ಪಟ್ಟಿ ಬಿಡುಗಡೆಯಾಗುವುದಕ್ಕೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿತ್ತು. ಆದರೆ ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ತೆರಿಗೆ ಪಾಲು ಬಿಡುಗಡೆ ಮಾಡಿದ ಬಳಿಕೆ ನನ್ನ ತೆರಿಗೆ, ನನ್ನ ಹಕ್ಕು ಮಾದರಿಯಲ್ಲಿ ಮತ್ತೊಮ್ಮೆ ಹೋರಾಟ ನಡೆಸುವುದಕ್ಕೆ ಸರ್ಕಾರ ಮುಂದಾಗಿದೆ. ದಕ್ಷಿಣದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಈ ಸಮಾವೇಶಕ್ಕೆ ಆಹ್ವಾನಿಸಿ ಕೇಂದ್ರದ ವಿರುದ್ದ ರಣಕಹಳೆ ಮೊಳಗಿಸುವದು ಇದರ ಉದ್ದೇಶವಾಗಿದೆ. ಈ ಶೃಂಗ ಇದೇ ತಿಂಗಳು 18 ಅಥವಾ 19ರಂದು ನಡೆಸಬೆಕೆಂದು ಸರ್ಕಾರದ ಹಂತದಲ್ಲಿ ಸಂಭಾವ್ಯ ದಿನಾಂಕ ನಿಗದಿಪಡಿಸಲಾಗಿದೆ. ಆದರೆ, ಇದೇ ಸಂದರ್ಭದಲ್ಲಿ ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಮಾಸಾಂತ್ಯದಲ್ಲಿ ದಕ್ಷಿಣದ ರಾಜ್ಯಗಳ ಸಮಾವೇಶ ನಡೆಯುವ ಸಾಧ್ಯತೆ ಇದೆ.