ಕೊಪ್ಪಳ : ತುಂಗಭದ್ರಾ ಜಲಾಶಯದ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿದ್ದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ವಾರದ ನಿರಂತರ ಪ್ರಯತ್ನದ ಫಲವಾಗಿ ತಾತ್ಕಾಲಿಕ ಗೇಟ್ ಅಳವಡಿಕೆ ಮಾತ್ರ ಮಾಡಲಾಗಿದೆ. ಇನ್ನೊಂದಡೆ ಜಲಾಶಯದ ಎಲ್ಲಾ ಗೇಟ್ ಗಳನ್ನು ಕೂಡಾ ಬದಲಾವಣೆ ಮಾಡಬೇಕು ಅಂತ ತಜ್ಞರು ಹೇಳಿದ್ದಾರೆ. ಹೀಗಾಗಿ ತುಂಗಭದ್ರಾ ಜಲಾಶಯ ಮಂಡಳಿ ಇದೀಗ ಗೇಟ್ ಬದಲಾವಣೆ ಬಗ್ಗೆ ಗಂಭೀರ ಪ್ರಯತ್ನ ಆರಂಭಿಸಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ ಬಳಿಯಿರೋ ತುಂಗಭದ್ರಾ ಜಲಾಶಯ, ಕರ್ನಾಟಕದ ನಾಲ್ಕು ಜಿಲ್ಲೆಗಳು, ನೆರೆಯ ತೆಲೆಂಗಾಣ, ಆಂದ್ರ ಪ್ರದೇಶದ ಲಕ್ಷಾಂತರ ಜನರು ಬದುಕಿಗೆ ಆಶ್ರಯವಾಗಿದೆ. ಈ ಜಲಾಶಯದ ನೀರನ್ನು ನಂಬಿಯೇ ಸರಿಸುಮಾರು ಹನ್ನೆರಡು ಲಕ್ಷಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಾರೆ. ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ಈ ನೀರೆ ಆಧಾರವಾಗಿದೆ. ಕಳೆದ ವರ್ಷ ಬರಗಾಲದಿಂದ ಒಮ್ಮೆ ಕೂಡಾ ಜಲಾಶಯ ತುಂಬಿರಲಿಲ್ಲಾ. ಆದ್ರೆ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಆಗಸ್ಟ್ ಮೊದಲ ವಾರದಲ್ಲಿಯೇ ಜಲಾಶಯ ಭರ್ತಿಯಾಗಿತ್ತು. ಆದ್ರೆ 2024 ರ ಆಗಸ್ಟ್ 10 ರಂದು ರಾತ್ರಿ ಸಮಯದಲ್ಲಿ ಡ್ಯಾಂ ನ 19 ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹೋಗಿತ್ತು. ಜೊತೆಗೆ ದೊಡ್ಡ ಮಟ್ಟದ ಆತಂಕವನ್ನುಂಟು ಮಾಡಿತ್ತು. ಇನ್ನು ಯಾವುದೇ ಜಲಾಶಯದ ಕ್ರಸ್ಟಗೇಟ್ ಗಳು, ಚೈನ್ ಲಿಂಕ್ ಗಳನ್ನು ಪ್ರತಿ ಐವತ್ತು ವರ್ಷಕ್ಕೊಮ್ಮೆ ಬದಲಾಯಿಸ ಬೇಕು. ಆದ್ರೆ ತುಂಗಭದ್ರಾ ಜಲಾಶಯಕ್ಕೆ ಎಪ್ಪತ್ತು ವರ್ಷಗಳ ಹಿಂದೆಯೇ ಕ್ರಸ್ಟಗೇಟ್, ಚೈನ್ ಲಿಂಕ್ ಗಳನ್ನು ಅಳವಡಿಸಿದ್ದು, ಇಲ್ಲಿವರಗೆ ಒಮ್ಮೆಯೂ ಬದಲಾಯಿಸಿಲ್ಲಾ. ಬದಲಾವಣೆ ಮಾಡಬೇಕು ಅನ್ನೋ ತಜ್ಞರ ಸೂಚನೆಯನ್ನು ಕೂಡಾ ಡ್ಯಾಂ ನಿರ್ವಹಣೆ ಮಾಡೋ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಕ್ಕೆ ಇಂತಹದೊಂದು ಘಟನೆ ನಡೆಯಿತಾ ಅಂತ ಹೇಳಲಾಗುತ್ತಿದೆ. ಇದನ್ನೇ ತಜ್ಞರು ಕೂಡಾ ಹೇಳಿದ್ದರು. ಗೇಟ್ ದುರಸ್ಥಿ ನಂತರ ರಾಜ್ಯ ಸರ್ಕಾರ ಕೂಡಾ ಗೇಟ್ ಬದಲಾವಣೆ ಮಾಡೋ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾಗಿ ಹೇಳಿತ್ತು. ಬೋರ್ಡ್ ಕೂಡಾ ಗೇಟ್ ಬದಲಾವಣೆ ಬಗ್ಗೆ ಚಿಂತನೆ ಆರಂಭಿಸಿದೆ. ಈಗಾಗಲೇ ತುಂಗಭದ್ರಾ ಜಲಾಶಯದ ತಾಂತ್ರಿಕ ತಜ್ಞರ ತಂಡ ಕಳೆದ ತಿಂಗಳು ಎರಡು ಬಾರಿ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಡ್ಯಾಂ ಕಾರ್ಯದರ್ಶಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ನವಂಬರ್ ಮೊದಲ ವಾರದಲ್ಲಿ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದಡೆ ಕೇಂದ್ರ ಜಲಶಕ್ತಿ ಆಯೋಗದ ಅಧಿಕಾರಿಗಳ ತಂಡ ಕೂಡಾ ಕಳೆದ ವಾರ ಜಲಾಶಯಕ್ಕೆ ಭೇಟಿ ನೀಡಿ ಎರಡು ದಿನಗಳ ಕಾಲ ಜಲಾಶಯ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿದೆ.
ಇನ್ನು ಕೊಚ್ಚಿಕೊಂಡು ಹೋಗಿರುವ ಜಲಾಶಯದ ಹತ್ತೊಂಬತ್ತನೆ ಕ್ರಸ್ಟಗೇಟ್ ಗೆ ಬದಲಾಗಿ ತಾತ್ಕಾಲಿಕ ಗೇಟ್ ಮಾತ್ರ ಅಳವಡಿಕೆ ಮಾಡಲಾಗಿದೆ. ಸದ್ಯ ಈ ಗೇಟ್ ನ್ನು ಬದಲಾವಣೆ ಮಾಡಿ, ಹೊಸ ಕ್ರಸ್ಟಗೇಟ್ ಅಳವಡಿಕೆ ಮಾಡೋದು ತುರ್ತಾಗಿದೆ. ಬರುವ ಮಳೆ ಗಾಲದೊಳಗಾಗಿ ಈ ಕಾರ್ಯವಾಗ ಬೇಕಿದೆ. ಆದ್ರೆ ಕೇವಲ 19 ನೇ ಗೇಟ್ ಮಾತ್ರವಲ್ಲಾ, ಎಲ್ಲಾ 33 ಗೇಟ್ ಗಳನ್ನು ಕೂಡಾ ಬದಲಾವಣೆ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಲೇ ಇವೆ. ಯಾಕಂದ್ರೆ ಉಳಿದ ಗೇಟ್ ಗಳ ಬಳಿ ಕೂಡಾ ಅನೇಕ ತೊಂದರೆಗಳು ಇರೋದಿರಂದ ಮತ್ತೊಂದು ಅವಘಡ ಸಂಭವಿಸೋದಕ್ಕಿಂತ ಹೆಚ್ಚಾಗಿ ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಎಲ್ಲಾ ಗೇಟ್ ಗಳ ಬದಲಾವಣೆಗ ಚಿಂತನೆ ನಡೆದಿದೆ. ಆದ್ರೆ ಜಲಾಶಯ ನಿರ್ವಹಣೆ ಮಾಡೋದು ಹೈದ್ರಾಬಾದ್ ನಲ್ಲಿರುವ ತುಂಗಭದ್ರಾ ಜಲಾಶಯ ಮಂಡಳಿ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಳ್ಳೋ ಅಧಿಕಾರ ವಿಲ್ಲಾ. ಹೀಗಾಗಿ ಮಂಡಳಿ ಗೇಟ್ ಬದಲಾವಣೆ ಮಾಡೋದಾದ್ರೆ ನಮ್ಮ ಪಾಲಿನ ಹಣವನ್ನು ನೀಡಲು ಸಿದ್ದ ಅಂತ ತುಂಗಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಸಚಿವರಾಗಿರುವ ಶಿವರಾಜ್ ತಂಗಡಗಿ.ಸದ್ಯ ಜಲಾಶಯಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗುತ್ತಲೇ ಇವೆ. ಆದ್ರೆ ಗೇಟ್ ಬದಲಾವಣೆ ಬಗ್ಗೆ ಅಧಿಕೃತ ಮಾಹಿತಿ ಮಂಡಳಿ ಯಿಂದ ಇನ್ನು ಹೊರಬಿದ್ದಿಲ್ಲಾ. ಆದ್ರೆ ಇನ್ನಾದ್ರು ಕೂಡಾ ನಿರ್ಲಕ್ಷ್ಯ ವಹಿಸದೇ, ಬೇಸಿಗೆ ಸಮಯದಲ್ಲಿ ಹೊಸ ಗೇಟ್ ಗಳ ಅಳವಡಿಕೆ ಕಾರ್ಯ ಆರಂಭಿಸಲು ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಆರಂಭಿಸಬೇಕಿದೆ. 33 ಗೇಟ್ ಗಳ ಅಳವಡಿಕೆಗೆ ಸಾಕಷ್ಟು ಸಮಯ ಬೇಕಾಗಿರೋದರಿಂದ, ಈ ನಿಟ್ಟಿನಲ್ಲಿ ಡ್ಯಾಂ ತೀವ್ರಗತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ.