ಸುಪ್ರಸಿದ್ಧವಾದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಪ್ರತಿವರ್ಷವೂ ಅದ್ಧೂರಿಯಾಗಿ ನೆರವೇರುತ್ತದೆ. ಪ್ರತಿ ವರ್ಷ ಕೂಡ ಇದಕ್ಕೆ ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಈಬಾರಿಯ ಗವಿಸಿದ್ದೇಶ್ವರ ಜಾತ್ರೆಗೆ ಅಮಿತಾಭ್ ಬಚ್ಚನ್ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗವಿಸಿದ್ದೇಶ್ವರ ಮಠದ ಆಡಳಿತ ಮಂಡಳಿ ಅಮಿತಾಭ್ಗೆ ಆಹ್ವಾನ ಪತ್ರ ನೀಡಿದೆ.
ಗವಿಸಿದ್ದೇಶ್ವರ ಮಠದ ಆಡಳಿತ ಮಂಡಳಿಯವರು ಇತ್ತೀಚೆಗೆ ಅಮಿತಾಭ್ ಬಚ್ಚನ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅಮಿತಾಭ್ ಖುಷಿಯಿಂದ ಆಮಂತ್ರಣ ಸ್ವೀಕಾರ ಮಾಡಿದ್ದು, ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ, ಅವರು ಈ ಜಾತ್ರೆಗೆ ಬರೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಗವಿಸಿದ್ದೇಶ್ವರ ಮಠದ ಜಾತ್ರೆ ದಕ್ಷಿಣ ಭಾರತದ ಕುಂಭ ಮೇಳ ಎಂದೆ ಖ್ಯಾತಿ ಪಡೆದಿದೆ. ಜನವರಿ 15ರಂದು ಈ ಜಾತ್ರೆ ನಡೆಯಲಿದೆ. ಒಂದೊಮ್ಮೆ ಅಮಿತಾಭ್ ಬಚ್ಚನ್ ಜಾತ್ರೆಗೆ ಆಗಮಿಸಿದರೆ ಇದರ ಮೆರಗು ಮತ್ತಷ್ಟು ಹೆಚ್ಚಲಿದೆ. ರಾಷ್ಟ್ರಮಟ್ಟದಲ್ಲಿ ಇದು ಸುದ್ದಿ ಆಗಲಿದೆ.
ಪ್ರತಿ ವರ್ಷವೂ ಗವಿಸಿದ್ದೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರುತ್ತದೆ. ಲಕ್ಷಾಂತರ ಮಂದಿ ಜಾತ್ರೆಗೆ ಆಗಮಿಸುತ್ತಾರೆ. ಬರುವ ಎಲ್ಲಾ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ. ಅನ್ನ ದಾಸೋಹವನ್ನು ಮಠದ ವತಿಯಿಂದಲೇ ನೆರವೇರಿಸಲಾಗುತ್ತದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದರೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಅನ್ನೋದು ವಿಶೇಷ.
ಅಮಿತಾಭ್ ಬಚ್ಚನ್ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅಶ್ವತ್ಥಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇದರ ಜೊತೆಗೆ ಅವರು ‘ಕೌನ್ ಬನೇಗಾ ಕರೋಡ್ಪತಿ’ಯ 16ನೇ ಸೀಸನ್ ನಡೆಸಿಕೊಡುತ್ತಾ ಇದ್ದಾರೆ.