ಮೈಸೂರು ; ಸುತ್ತೂರು ಜಾತ್ರಾ ಮಹೋತ್ಸವ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾತ್ರಿ ಮೈಸೂರಿಗೆ ಆಗಮಿಸಲಿದ್ದಾರೆ.
ರಾತ್ರಿ 10.50ಕ್ಕೆ ದೆಹಲಿಯಿಂದ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಅವರು, ನಗರದ ಖಾಸಗಿ ಹೊಟೇಲಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ನಂತರ 11.45ಕ್ಕೆ ಹೆಲಿಕಾಪ್ಟರ್ ಮೂಲಕ ಸುತ್ತೂರು ಗ್ರಾಮಕ್ಕೆ ಪ್ರಯಾಣ ಬೆಳೆಸಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಸುತ್ತೂರು ಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 2.30ಕ್ಕೆ ಖಾಸಗಿ ಹೋಟೆಲ್‌ಗೆ ಆಗಮಿಸಲಿದ್ದಾರೆ.
ಸಂಜೆ 3.30 ರಿಂದ 4.30ರ ತನಕ ಮೈಸೂರು ಕ್ಲಸ್ಟರ್ ಗೆ ಬರುವ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭೆ ಕ್ಷೇತ್ರಗಳ ಸಿದ್ಧತೆ ಬಗ್ಗೆ ಮಹತ್ವದ ಸಭೆ ನಡೆಸಲಿದ್ದಾರೆ. ಬಳಿಕ ಸಂಜೆ 5 ಗಂಟೆಗೆ ಮೈಸೂರಿನಿಂದ ಗುಜರಾತ್ ಗೆ ತೆರಳಲಿದ್ದಾರೆ.