ಹನುಮಂತನ ಪ್ರತಿಮೆ ಕಂಡು ಕೆರಳಿದ ಅಮೆರಿಕದ ನಾಯಕ; ವಿವಾದಾತ್ಮಕ ಪೋಸ್ಟ್

ಅಮೇರಿಕಾ: ಟೆಕ್ಸಾಸ್ ರಾಜ್ಯದ ಶುಗರ್ ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ 90 ಅಡಿ ಎತ್ತರದ ‘ಸ್ಟ್ಯಾಚ್ಯೂ ಆಫ್ ಯೂನಿಯನ್’ ಹನುಮಂತನ ಪ್ರತಿಮೆಯ ಕುರಿತು ರಿಪಬ್ಲಿಕನ್ ನಾಯಕ ಕಾರ್ಲೋಸ್ ಟರ್ಸಿಯೊಸ್ ನೀಡಿರುವ ಹೇಳಿಕೆಗಳು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಟೆಕ್ಸಾಸ್‌ನ ಈ ಭವ್ಯ ಪ್ರತಿಮೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಅವರು, ಇದನ್ನು “ಮೂರನೇ ಲೋಕದ ವಿದೇಶಿಯರ ಆಕ್ರಮಣ” ಎಂದು ಕರೆದಿದ್ದಾರೆ. ಅಮೆರಿಕ ಮತ್ತು ಟೆಕ್ಸಾಸ್ ಅನ್ನು ಹೊರಗಿನವರು ಆಕ್ರಮಿಸಿಕೊಳ್ಳುತ್ತಿದ್ದಾರೆ ಈ ಕೂಡಲೇ ಇಂತಹ ಬೆಳವಣಿಗೆಗಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಕಾರ್ಲೋಸ್ ಟರ್ಸಿಯೊಸ್ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ, “ಇದು ಪಾಕಿಸ್ತಾನ ಅಥವಾ ಭಾರತವಲ್ಲ, ಇದು ಟೆಕ್ಸಾಸ್‌ನ ಶುಗರ್ ಲ್ಯಾಂಡ್. ಮೂರನೇ ಜಗತ್ತಿನ ವಿದೇಶಿಯರು ನಿಧಾನವಾಗಿ ಅಮೆರಿಕವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅಮೆರಿಕದಲ್ಲಿ ಇಷ್ಟು ದೊಡ್ಡ ಪ್ರತಿಮೆಯ ಅಗತ್ಯವೇನಿದೆ? ಈ ಆಕ್ರಮಣವನ್ನು ನಿಲ್ಲಿಸಿ” ಎಂದು ಬರೆದುಕೊಂಡಿದ್ದಾರೆ. ಅವರ ಈ ಅನ್ಯದ್ವೇಷದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿವೆ. ಅನೇಕ ಬಳಕೆದಾರರು ಅಮೆರಿಕದ ಅಭಿವೃದ್ಧಿಯಲ್ಲಿ ವಲಸಿಗರ ಪಾತ್ರ ಮತ್ತು ಅಲ್ಲಿನ ಧಾರ್ಮಿಕ ಸ್ವಾತಂತ್ರ್ಯವನ್ನು ನೆನಪಿಸುವ ಮೂಲಕ ಟರ್ಸಿಯೊಸ್ ಅವರಿಗೆ ತಿರುಗೇಟು ನೀಡಿದ್ದಾರೆ.

2024ರಲ್ಲಿ ಅನಾವರಣಗೊಂಡ ಈ ಪಂಚಲೋಹದ ‘ಅಭಯ ಹನುಮಾನ್’ ಪ್ರತಿಮೆಯು ಅಮೆರಿಕದ ಅತಿ ಎತ್ತರದ ಹಿಂದೂ ಸ್ಮಾರಕಗಳಲ್ಲಿ ಒಂದಾಗಿದೆ. ಶ್ರೀ ಚಿನ್ನಜೀಯರ್ ಸ್ವಾಮೀಜಿ ಅವರ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡ ಈ ಪ್ರತಿಮೆಯು ಇಡೀ ಯುನೈಟೆಡ್ ಸ್ಟೇಟ್ಸ್‌ನ ಮೂರನೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ದೇವಸ್ಥಾನದ ಸಮಿತಿಯು ಇದನ್ನು ಭಕ್ತಿ, ಶಕ್ತಿ ಮತ್ತು ವಿಶ್ವ ಶಾಂತಿಯ ಸಂಕೇತವೆಂದು ಬಣ್ಣಿಸಿದ್ದು, ಆಧ್ಯಾತ್ಮಿಕ ಕೇಂದ್ರವಾಗಿ ಇದನ್ನು ರೂಪಿಸಿದೆ. ಆದರೆ, ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಚಿಹ್ನೆಗಳನ್ನು ಗುರಿಯಾಗಿಸಿಕೊಂಡಿರುವುದು ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ.




