ಬೆಂಗಳೂರು: ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಈಗಾಗಲೇ ಎಲ್ಲೇಡೆ ಸಿದ್ಧತೆಗಳು ನಡೆದಿದ್ದು, ಈ ಮದ್ಯೆ ಕೇಂದ್ರ ಸರ್ಕಾರ ಬಾಬಾಸಾಹೇಬರ ಜಯಂತಿಯಂದು ಸಾರ್ವತ್ರಿಕ ರಜೆ ಘೋಷಿಸಿ ಆದೇಶ ಹೊರಡಿಸಿದೆ.
ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವನ್ನು ತಮ್ಮ ಆಡಳಿತದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ರಾಷ್ಟ್ರೀಯ ಗೌರವವನ್ನು ಸಮರ್ಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಜಯಂತಿಯಂದು ಭಾರತಾದ್ಯಂತ ಎಲ್ಲಾ ಕೈಗಾರಿಕಾ ಸಂಸ್ಥೆಗಳು ಸೇರಿದಂತೆ, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಕಚೇರಿಗಳಿಗೂ ಸಾರ್ವತ್ರಿಕ ರಜೆ ಘೋಷಿಸಿರುವುದು ಅತ್ಯಂತ ಅರ್ಥಪೂರ್ಣ ಹಾಗೂ ಅಭಿನಂದನಾ ಪೂರ್ವಕ ನಿರ್ಧಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಡಾ. ಅಂಬೇಡ್ಕರ್ ಅವರ ಜಯಂತಿ ಅವರ ಸ್ಮರಣೆ ಹಾಗೂ ಆಚರಣೆಗಾಗಿ ಮಾತ್ರ ಸೀಮಿತಗೊಳ್ಳದೆ ಆ ದಿನದಂದು ಅವರ ಮಹಾನ್ ಪರಿಶ್ರಮದಿಂದ ರೂಪುಗೊಂಡ ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬ ಪ್ರಜೆಯೂ ಅಂಬೇಡ್ಕರ್ ಅವರನ್ನು ಭಕ್ತಿ ಹಾಗೂ ಅಭಿಮಾನದಿಂದ ಗೌರವಿಸುವ ದಿನವಾಗಲಿ, ಭಾರತದ ಚರಿತ್ರೆಯ ಸುವರ್ಣಾಕ್ಷರಗಳಲ್ಲಿ ಏಪ್ರಿಲ್ 14 ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಶ್ರೇಷ್ಠತೆಯನ್ನು ವಿಶ್ವ ಮೆಚ್ಚುವ ಹೆಮ್ಮೆಯ ದಿನವಾಗಲಿ ಎಂದು ಸಂಕಲ್ಪ ತೊಡೋಣ ಎಂದಿದ್ದಾರೆ.



