ಬಹುನಿರೀಕ್ಷಿತ ಪುಷ್ಪ-2 ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ. ಹಾಗಾಗಿ ದೇಶಾದ್ಯಂತ ಪ್ರಚಾರ ಮಾಡಲಾಗುತ್ತಿದೆ. ಹಿಂದಿಗೂ ಡಬ್ ಆಗಿ ತೆರೆಕಾಣಲಿದ್ದು, ಉತ್ತರ ಭಾರತದ ಪ್ರೇಕ್ಷಕರ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಬಿಹಾರದ ಪಟ್ನಾದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಎದುರು ‘ಪುಷ್ಪ 2’ ಚಿತ್ರತಂಡದವರು ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಮಾಡಿದ್ದಾರೆ. ಅಲ್ಲು ಅರ್ಜುನ್ ಜೊತೆ ಚಿತ್ರತಂಡ ಹಲವರು ಭಾಗಿ ಆಗಿದ್ದಾರೆ.
ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾವನ್ನು ಬಹಳ ಸಮಯ ತೆಗೆದುಕೊಂಡು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರು ಈ ಸಿನಿಮಾಗಾಗಿ ಸಾಕಷ್ಟು ಸಮಯ ಮೀಡಲಿಟ್ಟಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ನಿರ್ಮಾಣ ಸಂಸ್ಥೆ ಈ ಸಿನಿಮಾದ ಮೇಲೆ ನೂರಾರು ಕೋಟಿ ರೂಪಾಯಿ ಬಂಡವಾಳ ಹಾಕಿದೆ. ಬಿಡುಗಡೆಗೂ ಮುನ್ನವೇ ಭಾರಿ ಬಿಸ್ನೆಸ್ ಆಗಿದೆ. ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ಟ್ರೇಲರ್ ರಿಲೀಸ್ ಕಾರ್ಯಕ್ರಮವೇ ಸಾಕ್ಷಿ.
ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ, ಆಂಧ್ರದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಪಟ್ನಾದಲ್ಲಿ ‘ಪುಷ್ಪ 2’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ಬಂದ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಟ್ರೇಲರ್ ನೋಡಿದ ಬಳಿಕ ಪ್ರೇಕ್ಷಕರ ನಿರೀಕ್ಷೆ ಡಬಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಟ್ರೇಲರ್ ಟ್ರೆಂಡ್ ಸೃಷ್ಟಿ ಮಾಡಿದೆ.
ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್, ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಂತಾದವರು ನಟಿಸಿದ್ದ ‘ಪುಷ್ಪ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಅದರ ಸೀಕ್ವೆಲ್ ಆಗಿ ಮೂಡಿಬರುತ್ತಿರುವ ‘ಪುಷ್ಪ 2’ ಸಿನಿಮಾ ಸಾರ್ವಕಾಲಿಕ ಹಿಟ್ ಆಗಲಿದೆ ಎಂಬುದು ಅಭಿಮಾನಿಗಳ ನಂಬಿಕೆ. ಮೊದಲ ದಿನದ ಕೆಲೆಕ್ಷನ್ನಲ್ಲಿ ಈ ಸಿನಿಮಾ ಬೇರೆ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಲಿದೆ ಎಂಬ ನಿರೀಕ್ಷೆ ಇದೆ.
ರಾಷ್ಟ್ರ ಪ್ರಶಸ್ತಿ ಗರಿ
ವಿಶೇಷ ಎಂದರೆ ಅಲ್ಲು ಅರ್ಜುನ್ ಅವರಿಗೆ ʼಪುಷ್ಪʼ ರಾಷ್ಟ್ರ ಪ್ರಶಸ್ತಿ ಗರಿ ತಂದುಕೊಟ್ಟಿದೆ. ಅದುವರೆಗೆ ಸ್ಟೈಲಿಶ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್ ಈ ಚಿತ್ರದಲ್ಲಿ ಹಳ್ಳಿ ಹೈದನಾಗಿ ವಿಶೇಷ ಪಾತ್ರದಲ್ಲಿ ಮೋಡಿ ಮಾಡಿದ್ದರು. ʼಪುಷ್ಪ 2ʼ ಕೂಡ ಅವರ ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲಾಗುವ ಎಲ್ಲ ಲಕ್ಷಣಗಳಿವೆ.