ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಸರ್ಕಾರವು ಅಕ್ಕಪಡೆಯನ್ನು ರಚಿಸಲಾಗಿದ್ದು, ಈ ಪಡೆಯು ದಿನದಲ್ಲಿ 12 ಗಂಟೆಗಳ ಕಾಲ ನಿರಂತರವಾಗಿ ಗಸ್ತು ತಿರುಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ವಿಧಾನಸಭೆಯ ವಿಶೇಷ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಮೀ ಹೆಬ್ಬಾಳ್ಕರ್ ಅವರು, ಸುರಕ್ಷತೆಯ ದೃಷ್ಟಿಯಿಂದ ಇಲಾಖೆ ಕೈಗೊಂಡಿರುವ ಕ್ರಾಂತಿಕಾರಿ ಕ್ರಮಗಳನ್ನು ವಿವರಿಸಿದರು.
ದೌರ್ಜನ್ಯಕ್ಕೊಳಗಾಗಿ ದೂರು ನೀಡುವ ಮಹಿಳೆಯರು ಅಥವಾ ಮಕ್ಕಳ ಮಾಹಿತಿಯನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು. ಇದರಿಂದ ಸಂತ್ರಸ್ತರು ನಿರ್ಭಯವಾಗಿ ದೂರು ನೀಡಲು ಅವಕಾಶವಾಗಲಿದೆ. ಕಳೆದ ವರ್ಷ ನವೆಂಬರ್ 28ರಂದು ಚಾಲನೆ ನೀಡಲಾದ ‘ಅಕ್ಕಪಡೆ’ಯು ನಗರದಾದ್ಯಂತ ಹಾಗೂ ಪ್ರಮುಖ ಸ್ಥಳಗಳಲ್ಲಿ 12 ಗಂಟೆಗಳ ಕಾಲ ನಿರಂತರ ನಿಗಾ ವಹಿಸಲಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು. 1098: ಮಕ್ಕಳ ಸಹಾಯವಾಣಿ, 181: ಮಹಿಳಾ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಬಹುದು..
ದೌರ್ಜನ್ಯ ತಡೆಗಟ್ಟಲು ಕೇವಲ ನಗರ ಪ್ರದೇಶಗಳಲ್ಲದೆ, ಗ್ರಾಮ ಪಂಚಾಯಿತಿ ಮಟ್ಟದಿಂದಲೂ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ ಎಂದು ಸಚಿವರು ತಿಳಿಸಿದರು. “ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಬೀದಿ ನಾಟಕಗಳು ಮತ್ತು ಆಕಾಶವಾಣಿಯ ಮೂಲಕ ನಿರಂತರ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ,” ಎಂದು ಅವರು ವಿವರಿಸಿದರು.


