ಮುಂಬೈ: ಎನ್‌ಸಿಪಿ (NCP) ಮುಖ್ಯಸ್ಥ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ (66) ಅವರು ಇಂದು ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಈ ದುರಂತ ಸಂಭವಿಸಿದ್ದು, ಪವಾರ್ ಸೇರಿ ವಿಮಾನದಲ್ಲಿದ್ದ ಎಲ್ಲಾ ಆರೂ ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ಇಂದು ಬೆಳಿಗ್ಗೆ ಮುಂಬೈನಿಂದ ಬಾರಾಮತಿಗೆ ಚುನಾವಣಾ ಪ್ರಚಾರದ ನಿಮಿತ್ತ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ವಿಮಾನವು ಬೆಳಿಗ್ಗೆ ಸುಮಾರು 8:45ಕ್ಕೆ ಬಾರಾಮತಿ ರನ್‌ವೇನಲ್ಲಿ ಇಳಿಯುವ ವೇಳೆ ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ ಪತನಗೊಂಡಿದೆ.
ಈ ದುರಂತದಲ್ಲಿ ಅಜಿತ್ ಪವಾರ್ ಅವರೊಂದಿಗೆ ಇಬ್ಬರು ಪೈಲಟ್‌ಗಳು, ಪವಾರ್ ಅವರ ಭದ್ರತಾ ಅಧಿಕಾರಿ (PSO) ವಿಧೀತ್ ಜಾಧವ್, ಒಬ್ಬ ಅಟೆಂಡೆಂಟ್ ಹಾಗೂ ಮತ್ತೊಬ್ಬ ಪ್ರಯಾಣಿಕ ಪಿಂಕಿ ಜಾಧವ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ರಾಜಕೀಯ ಗಣ್ಯರ ತೀವ್ರ ಸಂತಾಪ
ಅಜಿತ್ ಪವಾರ್ ಅವರ ನಿಧನಕ್ಕೆ ರಾಷ್ಟ್ರಮಟ್ಟದಲ್ಲಿ ಸಂತಾಪ ಸೂಚಿಸಿದ್ಧಾರೆ.. “ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರ ನಿಧನ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರ ಹಠಾತ್ ಅಗಲಿಕೆ ಮಹಾರಾಷ್ಟ್ರ ರಾಜಕಾರಣಕ್ಕೆ ದೊಡ್ಡ ನಷ್ಟ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ,” ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
“ಅಜಿತ್ ಪವಾರ್ ಅವರ ಸಾವಿನ ಸುದ್ದಿ ಕೇಳಿ ತುಂಬಾ ನೋವಾಯಿತು. ಅವರು ರಾಜ್ಯದ ಅಭಿವೃದ್ಧಿಗೆ ಬಹಳ ಶ್ರಮಿಸಿದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ತನಿಖೆಗೆ ಆದೇಶಿಸಿದ್ದಾರೆ. ಬಾರಾಮತಿಯಲ್ಲಿ ನೀರವ ಮೌನ ಆವರಿಸಿದ್ದು, ಪವಾರ್ ಬೆಂಬಲಿಗರು ಕಂಬನಿ ಮಿಡಿಯುತ್ತಿದ್ದಾರೆ.


