ಬೆಂಗಳೂರು: ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಡಿ ಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಐಶ್ವರ್ಯ ಗೌಡ ವಂಚನೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಚಿನ್ನ ಪಡೆದು ಹಣ ನೀಡದೆ ವಂಚನೆ ಮಾಡಿರುವ ಆರೋಪ ಹೊತ್ತಿರುವ ಐಶ್ವರ್ಯ ಗೌಡಗೆ ಸೇರಿದ ಮತ್ತೊಂದು ಕಾರನ್ನು ಪೊಲೀಸರು ಸೀಜ್ ಮಾಡಿದ್ದರು. ಆ ಕಾರನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ ಬಳಸುತ್ತಿದ್ದರು. ಇದೀಗ ವಿನಯ್ ಕುಲಕರ್ಣಿ ಕಾರು ಚಾಲಕನನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಕಾರು ಚಾಲಕ ವೀರೇಶ್ ದಳವಾಯಿಯನ್ನು ಎಸಿಪಿ ಭರತ್ ವಿಚಾರಣೆ ಮಾಡಿದ್ದಾರೆ. ಐಶ್ವರ್ಯ ಗೌಡಗೆ ಸೇರಿದ ಬೆನ್ಜ್ ಕಾರು ವಿನಯ್ ಕುಲಕರ್ಣಿ ಮನೆಯಲ್ಲಿ ಪತ್ತೆಯಾಗಿದ್ದರಿಂದ ಚಾಲಕನನ್ನು ವಿಚಾರಣೆಗೆ ಕರೆಯಲಾಗಿತ್ತು.
ವಿಚಾರಣೆ ವೇಳೆ ಚಾಲಕ ವೀರೇಶ್, ಐಶ್ವರ್ಯ ಗೌಡ ಅವರು ವಿನಯ್ ಕುಲಕರ್ಣಿ ಅವರನ್ನು ಪರಿಚಯಸ್ತರು ಎಂದು ತಿಳಿಸಿದ್ದಾರೆ. ಐಶ್ವರ್ಯ ಗೌಡ ಈ ಹಿಂದೆ ಮಹಾರಾಷ್ಟ್ರಕ್ಕೆ ಹೋಗಿದ್ದಳು. ಈ ವೇಳೆ ರಾತ್ರಿ ವಿನಯ್ ಕುಲಕರ್ಣಿ ನಿವಾಸಕ್ಕೆ ಆಡಿ ಕಾರಿನಲ್ಲಿ ಬಂದಿದ್ದರು. ನಂತರ ವಾಪಸ್ಸು ಹೋಗುವಾಗ ಕಾರು ಬಿಟ್ಟು ವಿಮಾನದಲ್ಲಿ ಬೆಂಗಳೂರಿಗೆ ಹೋಗಿದ್ದರು ಎಂದು ವರದಿಯಾಗಿದೆ.
ಇನ್ನು ಐಶ್ವರ್ಯ ವಂಚನೆ ಮಾಡಿದ್ದ ಹಣದಿಂದ ಬೆಂಜ್ ಕಾರು ಖರೀದಿ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ. ಹೀಗಾಗಿಯೇ ಪೊಲೀಸರು ತನಿಖೆ ವೇಳೆ ಆಡಿ, ಬೆಂಜ್ , ಫಾರ್ಚುನಾರ್ ಕಾರುಗಳನ್ನು ಜಪ್ತಿ ಮಾಡಿದ್ದರು. ಇದೀಗ ಐಶ್ವರ್ಯ ಗೌಡಳ ವಂಚನೆ ಪ್ರಕರಣದ ಕೊನೆ ಹಂತದ ತನಿಖೆ ನಡೆಸುತ್ತಿರುವ ಪೊಲೀಸರು, ಶೀಘ್ರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.