Sunday, February 22, 2026
19.1 C
Bengaluru
Google search engine
LIVE
ಮನೆದೇಶ/ವಿದೇಶಶೈಕ್ಷಣಿಕ ವ್ಯವಸ್ಥೆಯಲ್ಲಿ ಎಐ ಅಲೆ; 'ಬೋಧನ್ ಎಐ' ಮೂಲಕ ಬರಲಿದೆ ಡಿಜಿಟಲ್ ಕಲಿಕೆ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಎಐ ಅಲೆ; ‘ಬೋಧನ್ ಎಐ’ ಮೂಲಕ ಬರಲಿದೆ ಡಿಜಿಟಲ್ ಕಲಿಕೆ

ತಂತ್ರಜ್ಞಾನದ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI)ಈಗ ಶಿಕ್ಷಣ ಕ್ಷೇತ್ರದಲ್ಲೂ ಅನಿವಾರ್ಯವಾಗುತ್ತಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಎಐ ಪರಿಕರಗಳನ್ನು ಅಳವಡಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಐಐಟಿ ಮದ್ರಾಸ್ ಆಯೋಜಿಸಿರುವ ‘Centre of Excellence in AI’ ಅಡಿಯಲ್ಲಿ ‘ಬೋಧನ್ ಎಐ’ ಎಂಬ ಲಾಭರಹಿತ ಸಂಸ್ಥೆಗೆ ಚಾಲನೆ ನೀಡಲಾಗಿದ್ದು, ಕಳೆದ ಬಜೆಟ್‌ನಲ್ಲಿ ಇದಕ್ಕಾಗಿ 500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಈ ಯೋಜನೆಯಡಿ ‘ಭಾರತ್ eduai’ ಎಂಬ ಡಿಜಿಟಲ್ ಚೌಕಟ್ಟನ್ನು ಸಿದ್ಧಪಡಿಸಲಾಗುತ್ತಿದ್ದು, ಇದು ಹಣಕಾಸು ಕ್ಷೇತ್ರದಲ್ಲಿ ಯುಪಿಐ ಕೆಲಸ ಮಾಡುವ ಮಾದರಿಯಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿದೆ. ವಿಶೇಷವಾಗಿ ಭಾರತೀಯ ಭಾಷೆಗಳಿಗೆ ಅನುಗುಣವಾಗಿ ಎಐ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸಲಿದ್ದು, ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿಯೇ ಸುಲಭವಾಗಿ ಕಲಿಯಲು ಮತ್ತು ಮಾಹಿತಿ ಪಡೆಯಲು ಸಹಕಾರಿಯಾಗಲಿದೆ. ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ನೇರವಾಗಿ ಶಾಲೆಗಳಿಗೆ ತಲುಪಿಸುವ ಗುರಿ ಹೊಂದಲಾಗಿದೆ.

ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರ ಪ್ರಕಾರ, ಈ ಎಐ ಸಾಧನಗಳು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಪಠ್ಯವನ್ನು ಒದಗಿಸುತ್ತವೆ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಶಿಕ್ಷಕರಿಗೆ ಮಾರ್ಗದರ್ಶನ ನೀಡಲು ಮತ್ತು ಪೋಷಕರಿಗೆ ತಮ್ಮ ಮಕ್ಕಳ ಪ್ರಗತಿಯನ್ನು ಗಮನಿಸಲು ನೆರವಾಗುತ್ತದೆ. ಧ್ವನಿ ಆಧಾರಿತ ಚಟುವಟಿಕೆಗಳ ಮೂಲಕ ಮಕ್ಕಳ ಉಚ್ಚಾರಣೆ ಮತ್ತು ಭಾಷಾ ಪ್ರೌಢಿಮೆಯನ್ನು ಸುಧಾರಿಸಿ, ಆ ಕುರಿತ ವರದಿಯನ್ನು ಶಿಕ್ಷಕರಿಗೆ ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಡಳಿತಾತ್ಮಕ ದೃಷ್ಟಿಯಿಂದಲೂ ಈ ತಂತ್ರಜ್ಞಾನವು ಬಹಳ ಉಪಯುಕ್ತವಾಗಿದ್ದು, ಜಿಲ್ಲಾವಾರು ಶಾಲೆಗಳ ಗುಣಮಟ್ಟ, ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಅಂಕಗಳು ಮತ್ತು ಮೂಲಸೌಕರ್ಯಗಳ ಬಗ್ಗೆ ನಿಖರ ಮಾಹಿತಿಯನ್ನು ನೀಡುತ್ತದೆ. ಮುಖ್ಯವಾಗಿ, ಮಕ್ಕಳ ವೈಯಕ್ತಿಕ ದತ್ತಾಂಶದ ಸುರಕ್ಷತೆಗೆ ಇಲ್ಲಿ ಆದ್ಯತೆ ನೀಡಲಾಗಿದ್ದು, ಯಾವುದೇ ಮಾಹಿತಿ ಸಾರ್ವಜನಿಕ ವೇದಿಕೆಗೆ ಲಭ್ಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಈ ಮೂಲಕ ಡಿಜಿಟಲ್ ಟ್ಯೂಷನ್ ಮತ್ತು ಪಠ್ಯದ ಪುನರ್ಮನನಕ್ಕೆ ಹೊಸ ಆಯಾಮ ದೊರೆಯಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments