Top Newsಸುದ್ದಿ

ಮಳೆಯ ಆರ್ಭಟಕ್ಕೆ ತಾಜ್ ಮಹಲ್‌ ಗೋಡೆಗಳಲ್ಲಿ ಬಿರುಕು! ಅಳಿಸಿ ಹೋಗ್ತಿವೆ ಕುರಾನ್ ಸಾಲುಗಳು

ಆಗ್ರಾ: ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ವಿಶ್ವವಿಖ್ಯಾತ ತಾಜ್​ ಮಹಲ್​ನ ಗೋಡೆ, ನೆಲ ಹಾಗೂ ಇತರ ಭಾಗಗಳಲ್ಲಿ ಬಿರುಕುಂಟಾಗಿರುವುದು ಕಂಡು ಬಂದಿದೆ. ಗೋಡೆಗಳ ಮೇಲೆ ಕೆತ್ತಲಾದ ಕುರಾನ್ ವಾಕ್ಯಗಳು ಮಸುಕಾಗಿವೆ ಎಂಬುದು ಅಲ್ಲಿನ ವಿಡಿಯೋ ದೃಶ್ಯಗಳಿಂದ ತಿಳಿದು ಬಂದಿದೆ.

ಈ ಕುರಿತಾಗಿ ಭಾರತೀಯ ಟೂರಿಸ್ಟ್‌ ಗೈಡ್ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶಕೀಲ್ ಚೌಹಾಣ್ ಅವರು ಮಾಹಿತಿ ನೀಡಿದ್ದು, ತಾಜ್ ಮಹಲ್‌ನ ಮುಖ್ಯ ಗುಮ್ಮಟದ ಸುತ್ತ ಇರುವ ಬಾಗಿಲುಗಳ ಮೇಲೆ ಅರೇಬಿಕ್ ಭಾಷೆಯಲ್ಲಿ ಕುರಾನ್‌ನ ಸಾಲುಗಳನ್ನ ಬರೆಯಲಾಗಿದೆ. ಈ ಸಾಲುಗಳು ಅಳಿಸಿ ಹೋಗುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಗೋಡೆಗಳಿಗೆ ಅಳವಡಿಕೆ ಮಾಡಲಾಗಿದ್ದ ಅಮೂಲ್ಯ ಶಿಲೆಗಳೂ ಕೂಡಾ ಸವೆಯುತ್ತಿವೆ. ನೆಲ ಹಾಸಿನಲ್ಲಿ ಇದ್ದ ಕಲ್ಲುಗಳೂ ಕಿತ್ತು ಹೋಗುತ್ತಿವೆ. ಗುಮ್ಮಟಗಳು, ಗೋಡೆಗಳು, ವಸ್ತು ಸಂಗ್ರಹಾಲಯದ ನೆಲ ಹಾಸುಗಳು ಬಿರುಕು ಬಿಟ್ಟಿರೋದನ್ನ ಕಾಣಬಹುದು ಎಂದು ಅವರು ಹೇಳಿದ್ದಾರೆ.

ಮುಖ್ಯ ಗುಮ್ಮಟದ ಸುತ್ತವಿರುವ ಬಾಗಿಲುಗಳ ಮೇಲೆ ಅರೇಬಿಕ್ ಭಾಷೆಯಲ್ಲಿ ಕೆತ್ತಿರುವ ಕುರಾನ್​ನ ಶ್ಲೋಕಗಳು ಮಾಸಿ ಹೀಗಿವೆ ಎಂದು ಭಾರತ ಪ್ರವಾಸಿ ಮಾರ್ಗದರ್ಶಿ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಶಕೀಲ್ ಚೌಹಾಣ್ ಹೇಳಿದ್ದಾರೆ. ಸೂಕ್ಷ್ಮ ತಂತ್ರಜ್ಞಾನದಿಂದ ಗೋಡೆಯಲ್ಲಿ ಕೂರಿಸಲಾಗಿರುವ ಅರೆ-ಅಮೂಲ್ಯ ಹರಳುಗಳು ಕೂಡ ಕಾಲದ ಪ್ರಹಾರಕ್ಕೆ ಸಿಲುಕಿ ಕ್ರಮೇಣ ಹಾಳಾಗುತ್ತಿವೆ. ಪಶ್ಚಿಮ ದಿಕ್ಕಿನ ನೆಲಹಾಸಿನ ಕಲ್ಲುಗಳು ಒಡೆದು ಹೋಗಿದ್ದು ಮುಖ್ಯ ಸ್ಮಾರಕ ಮತ್ತು ಐಕಾನಿಕ್ ಗುಮ್ಮಟದ ಭಾಗಗಳು ಕೂಡ ಹಾನಿಗೊಂಡಿವೆ ಎಂದು ಚೌಹಾಣ್ ತಿಳಿಸಿದ್ದಾರೆ.

ಎಎಸ್​ಐ ಧೋರಣೆಯ ಪ್ರಶ್ನೆ
ಅಧ್ಯಯನ ನಡೆಸಿದ ಪ್ರಕಾರ ಸ್ಮಾರಕದಲ್ಲಿ ಯಾವುದೇ ಸಂರಚನಾತ್ಮಕ ಸಮಸ್ಯೆ ಇಲ್ಲವೆಂದು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಹೇಳಿಕೊಂಡಿರುವುದನ್ನು ಪ್ರವಾಸಿ ಮಾರ್ಗದರ್ಶಿಗಳ ಕಲ್ಯಾಣ ಸಂಘದ ಅಧ್ಯಕ್ಷ ದೀಪಕ್ ದಾನ್ ಪ್ರಶ್ನಿಸಿದ್ದಾರೆ. ತಾಜ್ ಮಹಲ್ ಒಂದು ವಿಶ್ವ ಪ್ರಸಿದ್ಧ ಸ್ಮಾರಕವಾಗಿದೆ. ಯಾವುದೇ ಋಣಾತ್ಮಕ ಪ್ರಚಾರ ಬಹಳ ಬೇಗನೇ ಹಬ್ಬುತ್ತದೆ. ಇದರಿಂದ ಭಾರತ ಸಂಭಾವ್ಯ ಪ್ರವಾಸಿ ತಾಣವೆಂಬ ಇಮೇಜ್​ಗೆ ಹಾನಿಯಾಗುತ್ತದೆ ಎಂದು ದಾನ್ ಕಳವಳ ವ್ಯಕ್ತಪಡಿಸಿದ್ದಾರೆ. ಯುನಿಸ್ಕೋದ ವಿಶ್ವ ಪಾರಂಪರಿಕ ತಾಣವಾದ ತಾಜ್ ಮಹಲ್​ನಲ್ಲಿ ಯಾವುದೇ ಗಂಭೀರ ಸಂರಚನಾತ್ಮಕ ಸಮಸ್ಯೆಯಿಲ್ಲ ಎಂದು ಎಎಸ್​ಐ ಹೇಳಿತ್ತು.

Comments (0)

Your email address will not be published. Required fields are marked *

Back to top button