ಬೆಂಗಳೂರು: ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕೌಟುಂಬಿಕ ಕಲಹದಿಂದ ಮನನೊಂದು ಕ್ರಿಕೆಟ್ ಪಟು ನೇಣಿಗೆ ಶರಣಾದ ಘಟನೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲರಾಜ್ (41) ಆತ್ಮಹತ್ಯೆಗೆ ಶರಣಾದ ಕ್ರಿಕೆಟ್ ಪಟು. ಹೆಸರಘಟ್ಟ ರಸ್ತೆ ಬಳಿಯ ಸಿಲುವೆಪುರದಲ್ಲಿ ಘಟನೆ ನಡೆದಿದ್ದು, ಬಾಲರಾಜ್ 18 ವರ್ಷದ ಹಿಂದೆ ಪತ್ನಿ ಕುಮಾರಿ ಎಂಬುವರನ್ನ ಎರಡನೇ ಮದುವೆಯಾಗಿದ್ದರು. ಆದರೆ ಇಬ್ಬರ ಮಧ್ಯೆ ನಿರಂತರವಾಗಿ ಜಗಳವಾಗುತ್ತಿತ್ತು. ಗ್ರಾಮಾಂತರ ಭಾಗದಲ್ಲಿ ಕ್ರಿಕೆಟ್ ಪಟುವಾಗಿದ್ದ ಬಾಲರಾಜ್ ತನ್ನ ಪತ್ನಿ ತನಗೆ ಕಿರುಕುಳ ನೀಡುವುದರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಬಾಲರಾಜ್ ಆರೋಪಿಸಿದ್ದಾರೆ. ಈ ಸಂಬಂಧ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಗಲಾಟೆ ಬಳಿಕ ಬಾಲರಾಜ್ ಪತ್ನಿ ಮನೆ ತೊರೆದು ತವರು ಸೇರಿದ್ದಳು.

ಇತ್ತ ಯಾರೂ ಇಲ್ಲದ ವೇಳೆ ಡೆತ್‌ನೋಟ್ ಬರೆದು ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಬಾಲರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತದೇಹದ ಜೊತೆ ತಾನು ಪಡೆದಿದ್ದ ಟ್ರೋಫಿ, ಬ್ಯಾಟ್, ಬಾಲ್, ವಿಕೆಟ್ ಇಡುವಂತೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕೊನೆಯ ಆಸೆಯಂತೆ ಶವದ ಪೆಟ್ಟಿಗೆಯಲ್ಲಿ ಎಲ್ಲವನ್ನೂ ಇಟ್ಟು ಅಂತಿಮ ಸಂಸ್ಕಾರ ಮಾಡಲಾಗಿದೆ. ಘಟನೆ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights