Top Newsಕ್ರೈಂ ಸ್ಟೋರಿರಾಜ್ಯಸಿನಿಮಾಸುದ್ದಿ

ಇಂದು ಜಾಮೀನು ಪ್ರಕ್ರಿಯೆ ಪೂರ್ಣ – ಮತ್ತೆ ಬಿಜಿಎಸ್ ಆಸ್ಪತ್ರೆಗೆ ತೆರಳಿದ ದರ್ಶನ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ನಟ ದರ್ಶನ್ ಸೆಷನ್ಸ್ ಕೋರ್ಟ್ ಮುಂದೆ ಹಾಜರಾಗಿ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದರು. ಬಳಿಕ ಮತ್ತೆ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಗೆ ತೆರಳಿದರು.

ದರ್ಶನ್​ಗೆ ಶಸ್ತ್ರಚಿಕಿತ್ಸೆ ಮಾಡಿಸದೇ ಇದ್ದರೆ ಪಾರ್ಶ್ವವಾಯು ಆಗುತ್ತದೆ ಎಂದು ವೈದ್ಯರು ವರದಿ ನೀಡಿದ್ದರು. ಇದೇ ವರದಿ ನೀಡಿ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆ ಸೇರಿದ್ದರು. ಒಂದೂವರೆ ತಿಂಗಳು ಕಳೆದರೂ ದರ್ಶನ್ ಯಾವುದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ‘ಬಿಪಿ ಕಾರಣಕ್ಕೆ ಶಸ್ತ್ರಚಿಕಿತ್ಸೆ ಆಗಿಲ್ಲ’ ಎಂದು ದರ್ಶನ್ ಪರ ವಕೀಲರು ಹೇಳಿದ್ದರು. ಈಗ ದರ್ಶನ್ ಅವರು ಜಾಮೀನು ಪ್ರಕ್ರಿಯೆಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಶ್ಯೂರಿಟಿ ವೇಳೆ, ದರ್ಶನ್ ನಿಮಗೆ ಏನಾಗಬೇಕು ಎಂದು ಜಡ್ಜ್ ಕೇಳಿದರು. ಅದಕ್ಕೆ, ಸ್ನೇಹಿತ ಮತ್ತು ಸಹೋದರ ಎಂದು ಧನ್ವೀರ್ ಮತ್ತು ದಿನಕರ್ ಹೇಳಿದರು. ಕೊನೆಗೆ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿ ದರ್ಶನ್ ಮತ್ತೆ ಆಸ್ಪತ್ರೆಗೆ ಹಿಂದಿರುಗಿದರು.

ಕೋರ್ಟ್ ಮುಂದೆ ಇನ್ನೂ ಅನಾರೋಗ್ಯ ಸಮಸ್ಯೆ ಇರುವಂತೆ ದರ್ಶನ್ ಬಿಂಬಿಸಿಕೊಂಡರು. ಕುಂಟುತ್ತಲೆ ಕೋರ್ಟ್‌ಗೆ ಆಗಮಿಸಿದರು. ಕೋರ್ಟ್ ಒಳಗೆ ನಿಲ್ಲಲು ಆಗುತ್ತಾ ಇಲ್ಲ ಎಂಬಂತೆ ತೋರಿಸಿಕೊಂಡರು. ಕುಳಿತುಕೊಂಡು ವಿಶ್ರಾಂತಿ, ಬಳಿಕ ಕೂರಲು ಆಗುತ್ತಾ ಇಲ್ಲ ಎಂಬಂತೆ ನಿಲ್ಲೋದು ಮಾಡಿದರು. ಕೋರ್ಟ್ ಹೊರಭಾಗದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಜನ ಸೇರದಂತೆ ಸಿಟಿ ಸಿವಿಲ್ ಕೋರ್ಟ್ ಹೊರಭಾಗದಲ್ಲಿ ಪೊಲೀಸರ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

ದರ್ಶನ್‌ಗೆ ಬುಧವಾರದ ವರೆಗೂ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ. ಬಹುತೇಕ ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದು ಹೇಳಲಾಗಿದೆ. ವೈದ್ಯರ ಸಲಹೆ ಪಡೆದು ನಂತರ ದರ್ಶನ್ ಡಿಸ್ಚಾರ್ಜ್ ಆಗಲಿದ್ದಾರೆ.

Comments (0)

Your email address will not be published. Required fields are marked *

Back to top button