ಮಳೆ ನೀರು ನಿಲ್ಲುವ ಹಾಗೂ ಬ್ಲಾಕೇಜ್ ಸ್ಥಳಗಳನ್ನು ಶೀಘ್ರ ಸರಿಪಡಿಸಲು ಸೂಚನೆ: ತುಷಾರ್ ಗಿರಿ ನಾಥ್.

ಮಳೆಗಾಲದ ಮಳೆ ನೀರು ನಿಲ್ಲುವ ಹಾಗೂ ಬ್ಲಾಕೇಜ್ ಆಗುವ ಸ್ಥಳಗಳನ್ನು ಸಮೀಕ್ಷೆ ಮಾಡಿ ಕೂಡಲೆ ಸರಿಪಡಿಸಬೇಕೆಂದು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಮಳೆ ನೀರು ನಿಲ್ಲುವ ಹಾಗೂ ಬ್ಲಾಕೇಜ್ ಸ್ಥಳಗಳನ್ನು ಸಮೀಕ್ಷೆ ನಡೆಸಿ ಪಟ್ಟಿ ಮಾಡಿಕೊಂಡು ಕೂಡಲೆ ಅವುಗಳನ್ನು ಸರಿಪಡಿಸಬೇಕೆಂದು ಸೂಚಿಸಿದರು.

ಆಯಾ ವಲಯ ವ್ಯಾಪ್ತಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಬ್ಲಾಕೇಜ್ ಆಗುವ ಸ್ಥಳಗಳಲ್ಲಿ ಮಣ್ಣು, ಕಸ-ಕಡ್ಡಿಗಳನ್ನು ತೆರವುಗೊಳಿಸಿ ಸರಾಗವಾಗಿ ನೀರು ಹೋಗುವಂತೆ ಮಾಡಬೇಕು. ಇನ್ನು ರಸ್ತೆಗಳಲ್ಲಿ ನೀರು ನಿಲ್ಲುವ ಸ್ಥಳಗಳಲ್ಲಿ ಸೈಡ್ ಡ್ರೈನ್‌ಗಳಿಗೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಗ್ರೇಟಿಂಗ್ಸ್ ಗಳ ಬಳಿ ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಲಾಯಿತು.

ಅಧಿಕಾರಿಗಳು ಸ್ಥಳಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿ, ಶಿಲ್ಟ್ ಮತ್ತು ಟ್ರ್ಯಾಕ್ಟರ್ ಗಳನ್ನು ಬಳಸಿಕೊಂಡು ಸ್ವಚ್ಚತಾ ಕಾರ್ಯ ಮಾಡಬೇಕು. ಇರುವ ಸಮಸ್ಯೆಯನ್ನು ಕೂಡಲೆ ಬಗೆಹರಿ ಮಳೆ ಬರುವ ಸಮಯದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.

ರಸ್ತೆ ಗುಂಡಿಯನ್ನು ತ್ವರಿತವಾಗಿ ಮುಚ್ಚಿ:

ನಗರದಲ್ಲಿ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಬೇಕು. ಪ್ರಮುಖವಾಗಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿರುವ ಗುಂಡಿಗಳನ್ನು ಆದ್ಯೆತೆ ಮೇರೆಗೆ ಮುಚ್ಚಬೇಕು. ರಸ್ತೆಗಳು ಹಾಳಾಗಿದ್ದಲ್ಲಿ ಕೂಡಲೆ ಅದನ್ನು ಸರಿಪಡಿಸಬೇಕೆಂದು ಸೂಚಿಸಲಾಯಿತು.

ಡೆಂಘೀ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ:

ನಗರದಲ್ಲಿ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಸರಾಸರಿ 90 ರಿಂದ 95 ಪ್ರಕರಣಗಳು ಕಂಡುಬರುತ್ತಿವೆ. ಅದನ್ನು ಮತ್ತಷ್ಟು ಕಡಿಮೆ ಮಾಡಲು ಆಯಾ ವಲಯ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ್ ಕಲ್ಕೆರೆ, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ರಮೇಶ್, ರಮ್ಯಾ, ವಿನೋತ್ ಪ್ರಿಯಾ, ಕರೀಗೌಡ, ಸ್ನೇಹಲ್, ಗಿರೀಶ್, ಪ್ರೀತಿ ಗೆಹ್ಲೋಟ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

 

 

 

 

Leave a Reply

Your email address will not be published. Required fields are marked *

Verified by MonsterInsights