ಬೆಂಗಳೂರು: ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ಪ್ರಕರಣದಲ್ಲಿ ಸೈಬರ್ ಠಾಣೆ ಪೊಲೀಸರು ಮೂವರು ಕಿಡಿಗೇಡಿಗಳನ್ನು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಹಾಗೂ ಚಿತ್ರದುರ್ಗ ಮೂಲದ ಮೂವರನ್ನು ಬಂಧಿಸಿದ್ದಾರೆ. ಈ ಮೂವರು ಅಶ್ಲೀಲ ಮೆಸೇಜ್ ಹಾಕಿ ಸವಾಲ್ ಹಾಕಿದ್ದರು. ಐಪಿ ಅಡ್ರೆಸ್ ಆಧರಿಸಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನಟಿ ರಮ್ಯಾ ಒಟ್ಟಾರೆ 48 ಅಕೌಂಟ್‍ಗಳ ಮೇಲೆ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಹಲವು ಅಕೌಂಟ್ಗಳು ಡಿಲೀಡ್ ಆಗಿದೆ. ಅಷ್ಟರಲ್ಲಿ ಪೊಲೀಸರು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ನೀಡುವಂತೆ ಮನವಿ ಮಾಡಿದ್ದರು.
ಪೊಲೀಸರ ಮನವಿಯಂತೆ ಸಂಬಂಧಪಟ್ಟ ಸಂಸ್ಥೆಗಳು ಡಿಲಿಟ್ ಆಗಿದ್ದ ಅಕೌಂಟ್‍ಗಳ ಎಲ್ಲಾ ಮಾಹಿತಿಯನ್ನು ಸಿಸಿಬಿ ಪೊಲೀಸರಿಗೆ ನೀಡಿವೆ. ಈ ಅಶ್ಲೀಲ ಕಮೆಂಟ್ ಹಾಕಿ, ಅಕೌಂಟ್ ಡಿಲಿಟ್ ಮಾಡಿ ಆರಾಮಾಗಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ನಟಿ ರಮ್ಯಾ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯಸಿಗಬೇಕು ಎಂದು ಮಾಹಿತಿ ಹಂಚಿಕೊಂಡಿದ್ದರು. ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೋಲ್ ಮಾಡಿದ್ದರು.
ಇದರಿಂದ ಸಿಟ್ಟಿಗೆದ್ದ ನಟಿ ರಮ್ಯಾ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.


