ಸುದ್ದಿ

ಸಿಸಿಟಿವಿ ಸಾಕ್ಷ್ಯದೊಂದಿಗೆ ಸತ್ಯ ಬಯಲು ಮಾಡಿದ ‘ರಾಧಾ ರಮಣ’ ಖ್ಯಾತಿಯ ನಟಿ..!

ಕಿರುತೆರೆಯ ಜನಪ್ರಿಯ ನಟಿ ಕಾವ್ಯ ಗೌಡ ಮತ್ತು ಅವರ ಓರಗಿತ್ತಿ ಪ್ರೇಮಾ ನಡುವಿನ ಕೌಟುಂಬಿಕ ಕಲಹ ಈಗ ಹೊಸ ತಿರುವು ಪಡೆದುಕೊಂಡಿದೆ. ಕಳೆದ ಕೆಲವು ದಿನಗಳಿಂದ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದ ಈ ಇಬ್ಬರ ನಡುವಿನ ಗಲಾಟೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಕಾವ್ಯ ಗೌಡ ಇದೀಗ ಬಹಿರಂಗಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೋಗಳಲ್ಲಿ ಪ್ರೇಮಾ ಅವರು ಕಾವ್ಯ ಗೌಡ ಮೇಲೆ ಚಪ್ಪಲಿ ಎಸೆದಿರುವುದು ಮತ್ತು ಹಲ್ಲೆ ನಡೆಸಿರುವುದು ಸ್ಪಷ್ಟವಾಗಿ ದಾಖಲಾಗಿದೆ ಎಂದು ನಟಿ ಪ್ರತಿಪಾದಿಸಿದ್ದಾರೆ.

ಈ ಹಿಂದೆ ಮಾಧ್ಯಮಗಳ ಮುಂದೆ ಬಂದಿದ್ದ ಪ್ರೇಮಾ, ಕಾವ್ಯ ಗೌಡ ಮತ್ತು ಅವರ ಪತಿ ಸೋಮಶೇಖರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಆಸ್ತಿಗಾಗಿ ಕಿರಿಕ್ ಮಾಡುತ್ತಿದ್ದಾರೆ, ತಮ್ಮ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪ್ರೇಮಾ ದೂರಿದ್ದರು. ಅಲ್ಲದೆ, ಸೋಮಶೇಖರ್ ಅವರು ತಮ್ಮ ತಂಗಿಯ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು. ಈ ಪ್ರಕರಣವು ಈಗಾಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಉಭಯ ಕಡೆಯವರು ದೂರು-ಪ್ರತಿದೂರು ದಾಖಲಿಸಿದ್ದಾರೆ.

ತಮ್ಮ ಮೇಲಿನ ಆರೋಪಗಳಿಗೆ ಇನ್‌ಸ್ಟಾಗ್ರಾಮ್ ಮೂಲಕ ಸುದೀರ್ಘ ಪ್ರತಿಕ್ರಿಯೆ ನೀಡಿರುವ ಕಾವ್ಯ ಗೌಡ, “ಇಲ್ಲಿಯವರೆಗೆ ನೀವು ಕೇವಲ ಒಂದು ಬದಿಯ ಸುಳ್ಳು ಕಥೆಗಳನ್ನು ಮಾತ್ರ ಕೇಳಿದ್ದೀರಿ, ಈಗ ನಾನು ಸತ್ಯವನ್ನು ಹೊರಹಾಕುವ ಸಮಯ ಬಂದಿದೆ” ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದ ತನಗೆ ಈಗ ಮಾತನಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಕುಟುಂಬದ ಗೌರವ ಮತ್ತು ಮಗುವಿನ ಭವಿಷ್ಯಕ್ಕಾಗಿ ತಾವು ಇಷ್ಟು ದಿನ ಸುಮ್ಮನಿದ್ದದ್ದಾಗಿ ಅವರು ತಿಳಿಸಿದ್ದಾರೆ.

ಆಸ್ತಿ ವಿಚಾರದಲ್ಲಿ ತಮ್ಮ ಹೆಸರನ್ನು ಕೆಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ನಟಿ, ಸತ್ಯಕ್ಕೆ ಯಾವತ್ತೂ ಜಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಸತ್ಯಮೇವ ಜಯತೆ” ಎಂದು ಬರೆಯುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಲು ನಟಿ ಕಾವ್ಯ ಗೌಡ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ವೇಳೆ ಅವರು ತಮ್ಮ ಕುಟುಂಬದ ಮೇಲೆ ನಡೆದಿರುವ ಹಲ್ಲೆ ಮತ್ತು ಈ ಗಲಾಟೆಯ ಹಿಂದಿನ ಅಸಲಿ ಕಾರಣಗಳನ್ನು ಮತ್ತಷ್ಟು ದಾಖಲೆಗಳೊಂದಿಗೆ ಬಯಲು ಮಾಡುವ ಸಾಧ್ಯತೆ ಇದೆ.

Comments (0)

Your email address will not be published. Required fields are marked *

Back to top button