ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರಿಗೆ ಕಾನೂನು ಹೋರಾಟದಲ್ಲಿ ಸಣ್ಣದೊಂದು ಯಶಸ್ಸು ಸಿಕ್ಕಿದೆ. ಗನ್ ಲೈಸೆನ್ಸ್ ಅಮಾನತುಗೊಳಿಸಿದ್ದ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ಮಾರ್ಚ್ 6ರವರೆಗೆ ಮಧ್ಯಂತರ ತಡೆ ನೀಡಿದೆ. ಈ ಮೂಲಕ ನಟನಿಗೆ ಲೈಸೆನ್ಸ್ ವಿಚಾರದಲ್ಲಿ ತಾತ್ಕಾಲಿಕ ನಿರಾಳತೆ ಸಿಕ್ಕಂತಾಗಿದೆ.
ಜಾಮೀನು ಸಿಕ್ಕ ಅವಧಿಯಲ್ಲಿ ದರ್ಶನ್ ಅವರು ಗನ್ ಬಳಸಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಅಥವಾ ಬೆದರಿಕೆ ಹಾಕಬಹುದು ಎಂಬ ಕಾರಣಕ್ಕೆ ಪೊಲೀಸರು ಅವರ ಲೈಸೆನ್ಸ್ ಅಮಾನತು ಮಾಡಿದ್ದರು. ಇದನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. 2008ರಿಂದಲೂ ದರ್ಶನ್ ಲೈಸೆನ್ಸ್ ಹೊಂದಿದ್ದಾರೆ ಮತ್ತು ಪ್ರಸ್ತುತ ಗನ್ ಅನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂಬ ವಾದವನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಅಮಾನತು ಆದೇಶಕ್ಕೆ ತಡೆ ನೀಡಿದೆ.
ಗನ್ ಲೈಸೆನ್ಸ್ ವಿಚಾರದಲ್ಲಿ ಈ ಸಣ್ಣ ರಿಲೀಫ್ ಸಿಕ್ಕಿದ್ದರೂ, ಕೊಲೆ ಪ್ರಕರಣದಲ್ಲಿ ದರ್ಶನ್ ಅವರಿಗೆ ಜಾಮೀನು ಸಿಗುವುದು ಸದ್ಯಕ್ಕೆ ಅನುಮಾನವಾಗಿ ಕಾಣುತ್ತಿದೆ. ಸುಪ್ರೀಂಕೋರ್ಟ್ ಅವರ ಮೊದಲಿನ ಜಾಮೀನು ರದ್ದುಗೊಳಿಸಿದ ನಂತರ ಅವರು ಮತ್ತೆ ಜೈಲು ಸೇರಿದ್ದು, ಸದ್ಯ ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ನಡೆಯುತ್ತಿದೆ.


