ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಬೆಟ್ಟೆಗೌಡನಪಾಳ್ಯದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. 29 ವರ್ಷದ ಪ್ರತಿಭಾ ಎಂಬ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪತಿಯೇ ಈಕೆಯನ್ನು ಕೊಲೆ ಮಾಡಿ ಸ್ವಿಮ್ಮಿಂಗ್ ಪೂಲ್‌ಗೆ ಎಸೆದಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ತೋಟದ ಮನೆಯಲ್ಲಿ ನಡೆದಿದ್ದೇನು?
ಕೋಡಿಹಳ್ಳಿ ಹೋಬಳಿಯ ಬೆಟ್ಟೆಗೌಡನಪಾಳ್ಯ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯೊಂದರಲ್ಲಿ ಪ್ರತಿಭಾ ಮತ್ತು ಪತಿ ಬಾಬು ವಾಸವಿದ್ದರು. ನಿನ್ನೆ ಈ ಮನೆಯ ಸ್ವಿಮ್ಮಿಂಗ್ ಪೂಲ್‌ನಲ್ಲಿ ಪ್ರತಿಭಾ ಅವರ ಶವ ತೇಲುತ್ತಿರುವುದು ಪತ್ತೆಯಾಗಿದೆ. ಪ್ರತಿಭಾ ಅವರು ಬಾಬುಗೆ ಎರಡನೇ ಪತ್ನಿಯಾಗಿದ್ದು, ದಂಪತಿಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಪ್ರತಿಭಾ ಅವರ ಪೋಷಕರು ಪತಿ ಬಾಬು ವಿರುದ್ಧ ಕಿಡಿಕಾರಿದ್ದಾರೆ. “ನನ್ನ ಮಗಳನ್ನು ಸಂಚು ರೂಪಿಸಿ ಕೊಲೆ ಮಾಡಲಾಗಿದೆ. ಕೃತ್ಯವನ್ನು ಮುಚ್ಚಿಹಾಕಲು ಮತ್ತು ಅದು ಆಕಸ್ಮಿಕ ಸಾವು ಎಂದು ಬಿಂಬಿಸಲು ಆಕೆಯ ದೇಹವನ್ನು ಈಜುಕೊಳಕ್ಕೆ ಎಸೆಯಲಾಗಿದೆ,” ಎಂದು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆ ಪ್ರತಿಭಾ ಪೋಷಕರ ದೂರಿನ ಮೇರೆಗೆ ಪತಿ ಬಾಬುನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


